

ಕೊಪ್ಪ: ಪಟ್ಟಣ ಪಂಚಾಯಿತಿಯಲ್ಲಿ 23 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಜನರ ಮೂಲ ಸೌಕರ್ಯಗಳನ್ನು ಪೂರೈಸಲು ವಿಫಲವಾಗಿದೆ ಎಂದು ಕರ್ನಾಟಕ ನಾಗರಿಕ ಹಕ್ಕುಗಳ ರಕ್ಷಣಾ ಸಂಘದ (ಎಪಿಸಿಆರ್) ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಟೀಕಿಸಿದರು.
ಪಟ್ಟಣ ಪಂಚಾಯಿತಿ ಎದುರು ಸೋಮವಾರ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹಿರೀಕೆರೆ ಬಳಿ ಲೇಔಟ್‌ನಲ್ಲಿ ಮನೆ ನಿರ್ಮಾಣವಾಗಿಲ್ಲ. ಆದರೆ ಕೊಳಚೆ ನೀರು ಕೆರೆಗೆ ಸೇರುತ್ತಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಇತ್ತೀಚೆಗೆ ಅಶುದ್ಧ ನೀರು ಪೂರೈಕೆಯಾಗಿರುವುದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಒಂದು ವೇಳೆ ಲೇಔಟ್ನಿಂದ ಕೆರೆಗೆ ಕೊಳಚೆ ನೀರು ಸೇರುತ್ತಿದೆ ಎಂದು ದೃಢಪಟ್ಟರೆ ಕಾಂಗ್ರೆಸ್ ಈ ಬಗ್ಗೆ ಹೋರಾಟ ಮಾಡಲು ಸಿದ್ಧ. ಮಾಜಿ ಶಾಸಕರ ಕುಟುಂಬ ಎನ್.ಆರ್.ಪುರದಲ್ಲಿ ಕೆರೆ ಜಾಗ ಒತ್ತುವರಿ ಮಾಡಿದೆ. ಅಲ್ಲಿ ಕೆರೆ ಒತ್ತುವರಿ ಮಾಡಿ, ಕೊಪ್ಪಕ್ಕೆ ಬಂದು ಕೆರೆ ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ನುಡಿದಂತೆ ನಡೆಯುವುದೇ ಆಗಿದ್ದಲ್ಲಿ ಕೆರೆ ಒತ್ತುವರಿ ಜಾಗ ಬಿಟ್ಟುಕೊಡಲಿ ಎಂದು ಸವಾಲು ಹಾಕಿದರು.
ವರ್ತಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ ಮಾತನಾಡಿ, 1996ರಲ್ಲಿ ನಿವೇಶನಕ್ಕೆ ನಿಯಮಾನುಸಾರ ದಾಖಲೆಯಾಗಿದೆ. ಲೇಔಟ್‌ನಿಂದ ಉಂಟಾಗುವ ಕೊಳಚೆ ನೀರು ಕೆರೆ ಸೇರದಂತೆ ತಡೆಯಲು 38 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕೆಸುವಿನ ಕೆರೆ ಒತ್ತುವರಿಯಾಗಿರುವ ಬಗ್ಗೆ, ಮುಸುರೆಹಳ್ಳಕ್ಕೆ ಸೇರುವ ಕೊಳಚೆ ನೀರಿನ ಬಗ್ಗೆ ಮಾತನಾಡಿ. ಪಕ್ಷ ರಾಜಕೀಯಕ್ಕಾಗಿ ಜನರನ್ನು ಬಲಿ ಕೊಡಬೇಡಿ. ಸಾರ್ವಜನಿಕರಿಗೆ ತೊಂದರೆ ಮಾಡಿ ಲೇಔಟ್ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.
ವಕೀಲ ರಜಿತ್ ಮಾತನಾಡಿ, ಅಶುದ್ಧ ನೀರು ಪೂರೈಕೆ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಮುಖಂಡರು ತಿರಂಗಾ ಯಾತ್ರೆಗೆ ಕರೆ ಕೊಟ್ಟಿದ್ದಾರೆ. ಅಶುದ್ಧ ನೀರು ಸೇವಿಸಿ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕನಿಷ್ಠ ಮೂಲ ಸೌಕರ್ಯ ಕೊಡಲು ವಿಫಲವಾಗಿದ್ದಾರೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಮೈತ್ರಿ, ರಶೀದ್, ನಾಮನಿರ್ದೇಶಿತ ಸದಸ್ಯರಾದ ಸಂದೇಶ್, ಸುಮಾ ಪಾರ್ವತೇಗೌಡ, ಮಹಮ್ಮದ್, ಕೆಡಿಪಿ ಸದಸ್ಯ ರಾಜಶಂಕರ್, ಭೂ ಮಂಜೂರಾತಿ ಸಮಿತಿ ಸದಸ್ಯ ಶಂಕರಪ್ಪ, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.