ಕೊನೆಯದಾಗಿ ಅಲ್ಲಾ ಹೇಳಿದ್ಹಂಗೆ‌ ಕೇಳ್ತೇನೆ: ಕಾಂಗ್ರೆಸ್ ಬಂಡು ಅಭ್ಯರ್ಥಿ ಖಾದ್ರಿ ಉವಾಚ

IMG_20241028_141249
Published on

ಬೆಂಗಳೂರು: ಗೊಂದಲದಲ್ಲಿ ಇಲ್ಲ, ಇತ್ತ ನಾಯಕರ ಮಾತು ಕೇಳಬೇಕೋ ? ಅತ್ತ ನಂಬಿದ ಕಾರ್ಯಕರ್ತರು, ಬೆಂಬಲಿಗರು ಜತೆಗೆ ನಿಲ್ಲಬೇಕೋ ಎಂಬ ಸಂದಿಗ್ಧದಲ್ಲಿದ್ದೇನೆ. ಕೊನೆಯದಾಗಿ ಅ. 30ರಂದು ಅಲ್ಲಾ ಹೇಳಿದ್ಹಂಗೆ ಕೇಳ್ತೇನೆ. ಇದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಯ್ಯದ್ ಅಜ್ಜಂಪೀರ್ ಖಾದ್ರಿ ಉವಾಚ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರೂ ಹೈಜಾಕ್ ಮಾಡಿಲ್ಲ, ಆ ಪದ ಬಳಸಲು ಇಷ್ಟಪಡುವುದಿಲ್ಲ. ಆದರೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿದ್ದೇನೆ. ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್, ಮತ್ತೊಬ್ಬರನ್ಮು ಜತೆಗೆ ಬಿಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ನಾಮಪತ್ರ ಹಿಂಪಡೆಯುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಹೀಗಿರುವಾಗ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಲಾಗದು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಬೇಕು ಎನ್ನುವುದಷ್ಟು ನನ್ನ ಗುರಿ. ಈ ಕಾರಣಕ್ಕೆ ನನಗೇ ಟಿಕೆಟ್ ಕೊಡಿ, ಘೋಷಿತ ಅಭ್ಯರ್ಥಿಯನ್ನೇ ಹಿಂದಕ್ಕೆ ಸರಿಸಿ ಎಂದು ನಾಯಕರಲ್ಲಿ ಕೇಳುತ್ತಿರುವೆ ಎಂದು ಅಜ್ಜಂಪೀರ್ ಖಾದ್ರಿ ಹೇಳಿದರು.

ಆಣೆ ಪ್ರಮಾಣಕ್ಕೆ ಸಿದ್ಧ

ಹೊಂದಾಣಿಕೆ ರಾಜಕಾರಣ ಎನ್ನುವುದು ಸುಳ್ಳು ಆರೋಪ. ನನ್ನದು ಸಂತ ಶಿಶುನಾಳ ಶರೀಫರ ಮನೆತನ. ಎಲ್ಲಿಗೆ ಬಂದು ಬೇಕಾದರೂ ಆಣೆ ಪ್ರಮಾಣ ಮಾಡುವೆ. ಇಂತಹ ವದಂತಿ ನೀವು (ಮಾಧ್ಯಮ ಪ್ರತಿನಿಧಿಗಳು) ನಂಬಬೇಡಿ. ಅಕಸ್ಮಾತ್ ಸ್ಪರ್ಧೆಯಲ್ಲಿ ಉಳಿದರೆ ನೀವೇ (ಪತ್ರಕರ್ತರು)ಬಂದು ನನ್ನ ಪರ ಪ್ರಚಾರ ಮಾಡಬೇಕು. ನಾಮಪತ್ರ ಹಿಂಪಡೆಯುವ ಬಗ್ಗೆ‌ ಈಗಲೇ ಹೇಳುವುದು ಕಷ್ಟಕರವೆಂದು ಪುನರುಚ್ಚರಿಸಿದರು.

ಕಳೆದ 23 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವೆ. ಅದರ ಕೂಲಿ ಕೇಳುತ್ತಿರುವೆ. ಕ್ಷೇತ್ರದ ಬಡವರ ಪರ ಕೆಲಸ ಮಾಡಲು‌ ಬಯಸಿರುವೆ. ಸ್ಥಾನಮಾನಕ್ಕಿಂತ ಪಕ್ಷವೇ ಮುಖ್ಯ. ಅದೇ ಕಾಲಕ್ಕೆ ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಕೈಬಿಡಲಾಗದು. ಅವರೊಂದಿಗೆ ಮಾತುಕತೆ ನಡೆಸಲು ಇಚ್ಛಿಸಿರುವೆ.

ಸಿಎಂ, ಡಿಸಿಎಂ, ಸಚಿವರು ಎಲ್ಲರೂ ನನ್ನ ಮೇಲೆ ಹೆಚ್ಚಿನ ಪ್ರೀತಿ, ವಿಶ್ವಾಸವಿರಿಸಿದ್ದಾರೆ. ಹಿರಿಯ ಸೋದರರಂತಿರುವ ಜಮೀರ್ ಅಹ್ಮದ್ ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಸಂದಿಗ್ಧದಲ್ಲಿರುವೆ. ಅ.30ರ ಮಧ್ಯಾಹ್ನ 3ರವರೆಗೆ ಕಾಲಾವಕಾಶ ಇದೆಯಲ್ಲ. ಅಲ್ಲಾ, ದೇವರ ಇಚ್ವೆಯಂತೆಯೇ ಆಗಲಿದೆ ಎಂದ ಅಜ್ಜಂಪೀರ್ ಖಾದ್ರಿ ಬಂಡಾಯದ ಬಾವುಟ‌ ಇಳಿಸಿರುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net