

ಅರಕಲಗೂಡು: ದೇಶದ ಗಡಿ ಕಾಯುವ ಸೈನಿಕರಷ್ಟೆ ಶ್ರಮವಹಿಸಿ ಮಹಾಮಾರಿ ಕರೊನಾ ಸೋಂಕು ತಡೆಗೆ ಪ್ರಾಣ ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕರೊನಾ ವಾರಿಯರ್ಸ್ ಗಳ ಸೇವೆಗೆ ಬೆಲೆ ಕಟ್ಟಲು ಸಾಧ್ಯವಾಗದು ಎಂದು ಮಾಜಿ ಸಚಿವ ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕೊಣನೂರು ವೈಎಸ್ ಆರ್ ಕಲ್ಯಾಣ ಮಂಟಪದಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ಬುಧವಾರ ಕರೊನಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲೆಡೆ ಮಹಾ ಮಾರಿಯಾಗಿ ವ್ಯಾಪಿಸುತ್ತಿರುವ ಕರೊನಾ ಸೋಂಕು ಇಡೀ ಮನುಕುಲಕ್ಕೆ ಕಂಟಕವಾಗುತ್ತಿದೆ. ಈ ನಡುವೆ ಜೀವದ ಹಂಗು ತೊರೆದು ಜನರಿಗೆ ತಿಳುವಳಿಕೆ ನೀಡಿ ಸೋಂಕು ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್ ಗಳ ಸೇವೆ ಅನನ್ಯವಾದದ್ದು. ಜನಸಮೂಹ ಇವರ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದರು.
ಕರೊನಾ ಸೋಂಕು ತಡೆಗೆ ಲಾಕ್ ಡೌನ್ ಒಂದೇ ಪರಿಹಾರವಲ್ಲ, ಸಾರ್ವಜನಿಕರು ಸದಾ ಎಚ್ಚೆತ್ತು ಸ್ವಯಂಪ್ರೇರಿತರಾಗಿ ಪರಸ್ಪರ ದೈಹಿಕ ಅಂತರ ಕಾಪಾಡಿಕೊಂಡು ಸುರಕ್ಷತಾ ಕ್ರಮಗಳನ್ನು ಪಾಲಿಸಿ ಜನ ಸಮುದಾಯಕ್ಕೆ ಸೋಂಕು ಹರಡದಂತೆ ಜಾಗೃತಿ ವಹಿಸಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾಳೆಯಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಧೈರ್ಯ ತುಂಬುವ ಮೂಲಕ ಉತ್ತಮ ಫಲಿತಾಂಶ ಬರಲು ಸಹಕರಿಸಬೇಕಿದೆ. ಯಾರೊಬ್ಬರೂ ಸರ್ಕಾರದ ಸಲಹೆಗಳನ್ನು ತಿರಸ್ಕರಿಸಬಾರದು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ನರ್ಸ್ ಗಳು, ನೂರಾರು ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಬಟ್ಟೆ, ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸಬ್ ಇನ್ಸ್ ಪೆಕ್ಟರ್ ಸಾಗರ್,ಆರೋಗ್ಯ ನಿರೀಕ್ಷಕ ಆನಂದಗೌಡ, ಮುಖಂಡರಾದ ಕೆ.ವಿ. ಪ್ರಸನ್ನ, ಕ್ಲಾಸಿಕ್ ರವಿ, ಮೋಹನ್, ದರ್ಶನ್, ಮಹೇಶ್, ಶ್ರೀನಿವಾಸಮೂರ್ತಿ ಹಾಗೂ ಅಭಿಮಾನಿ ಬಳಗದವರು ಹಾಜರಿದ್ದು ಸಹಕರಿಸಿದರು.