

ಶ್ರೀಮಂಗಲ: ಟಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಟ್ಟಂಗಡ ಕುಟುಂಬದ ಆಶ್ರಯದಲ್ಲಿ ಎರಡನೇ ವರ್ಷದ ಕೊಡವ ಕೌಟುಂಬಿಕ ಹಗ್ಗ-ಜಗ್ಗಾಟ ಪಂದ್ಯಾವಳಿಗೆ ಭಾನುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಪಂದ್ಯಾವಳಿಗೆ ಮುನ್ನ ಟಿ.ಶೆಟ್ಟಿಗೇರಿ ಕೊಡವ ಸಮಾಜದಿಂದ ಮುಖ್ಯ ಮಾರ್ಗದಲ್ಲಿ ಆಟದ ಮೈದಾನದವರೆಗೆ ಕೊಡವ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು. ಚೆಟ್ಟಂಗಡ ಕುಟುಂಬ ಹಗ್ಗ-ಜಗ್ಗಾಟ ಪಂದ್ಯಾವಳಿಯಿಂದ ಟಿ. ಶೆಟ್ಟಿಗೇರಿ ಪಟ್ಟಣ ಮತ್ತು ಆಟದ ಮೈದಾನದಲ್ಲಿ ಹಬ್ಬದ ಸಡಗರ ಸಂಭ್ರಮ ಮೂಡಿಸಿದೆ. ಮೆರವಣಿಗೆಯಲ್ಲಿ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಬಾಳೋ ಪಾಟ್, ಒಡ್ಡೋಲಗ ಸಹಿತ ನೂರಾರು ಮಹಿಳೆಯರು, ಮಕ್ಕಳು, ಪುರುಷರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಮೆರವಣಿಗೆ ಮೆರಗು ನೀಡಿದರು.
ಮೈದಾನದಲ್ಲಿ ಊರ್ ತಕ್ಕರಾದ ಚೆಟ್ಟಂಗಡ ಹ್ಯಾರಿ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದೇಶ ತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಹಗ್ಗ-ಜಗ್ಗಾಟ ಕ್ರೀಡೆ ಹಳೆಯ ಇತಿಹಾಸ ಹೊಂದಿದೆ. 12ನೇ ಶತಮಾನದಲ್ಲಿ ಈ ಕ್ರೀಡೆ ಚಾಲ್ತಿಗೆ ಬಂದಿತ್ತು. ಕೊಡಗಿನಲ್ಲಿ ಪೊನ್ನೋಲ ತಂಡ ಕುಟುಂಬ ಕೊಡವ ಕೌಟುಂಬಿಕ ಪಂದ್ಯಾವಳಿಯಾಗಿ ಕಳೆದ ವರ್ಷ ನಡೆಸಿದ್ದು, ಹಗ್ಗ-ಜಗ್ಗಾಟವನ್ನು ಜಿಲ್ಲೆಯಲ್ಲಿ ಜನಪ್ರಿಯಗೊಳಿಸಲು ಅಡಿಗಲ್ಲು ಹಾಕಿದೆ ಎಂದು ಶ್ಲಾಘಿಸಿದರು. ಚೆಟ್ಟಂಗಡ ಕುಟುಂಬ ಎರಡನೇ ವರ್ಷದ ಹಗ್ಗ-ಜಗ್ಗಾಟ ಪಂದ್ಯಾವಳಿ ನಡೆಸುತ್ತಿರುವುದು ಸಂತೋಷದಾಯಕ. ಕೊಡವ ಜನಾಂಗ ಹಾಕಿ ಕ್ರೀಡೆಗೆ ಸೀಮಿತವಲ್ಲ, ಇತರ ಕ್ರೀಡೆಯಲ್ಲೂ ಆಸಕ್ತಿ-ಪ್ರತಿಭೆ ಹೊಂದಿರುವುದು ಇದರಿಂದ ಗೊತ್ತಾಗುತ್ತದೆ. ಕೃಷಿಯ ಒತ್ತಡದಲ್ಲಿಯೂ ಕೊಡವ ಜನಾಂಗ ಹಾಕಿ, ಕ್ರಿಕೆಟ್, ಹಗ್ಗ-ಜಗ್ಗಾಟಗಳಂತಹ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ. ಹಗ್ಗ-ಜಗ್ಗಾಟ ಶಾರೀರಿಕ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಕಾರಿ. ಕೊಡವ ಕುಟುಂಬ ಹಗ್ಗ-ಜಗ್ಗಾಟ ಪಂದ್ಯಾವಳಿ ಯಶಸ್ವಿಯಾಗಿ ಮುಂದೆಯೂ ನಡೆಸುವಂತಾಗಲಿ ಎಂದು ಕರೆ ನೀಡಿದರು.
ತಾವಳಗೇರಿ ಮೂಂದ್ ನಾಡ್, ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಪೊನ್ನೋಲತಂಡ ಕುಟುಂಬ ಕಳೆದ ವರ್ಷ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಸ್ಪರ್ಧೆ ಏರ್ಪಡಿಸುವ ಅಲೋಚನೆಯಲ್ಲಿದ್ದಾಗ ಜಿಲ್ಲೆಯಲ್ಲಿ ಈ ಕ್ರೀಡೆಗೆ ಎಷ್ಟರ ಮಟ್ಟಿಗೆ ಪ್ರೋತ್ಸಾಹ ಸಿಗಬಹುದೆಂಬ ಸಂಶಯವಿತ್ತು. ಆದರೂ ಕಳೆದ ವರ್ಷ 42 ತಂಡಗಳು ಭಾಗವಹಿಸಿದ್ದವು. ಪ್ರಸಕ್ತ ವರ್ಷ 177 ತಂಡ ಭಾಗವಹಿಸಿವೆ. ಹಗ್ಗ-ಜಗ್ಗಾಟಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದ್ದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಮತ್ತೋರ್ವ ಅತಿಥಿ ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಕೊಡಗು ಸಣ್ಣ ಜಿಲ್ಲೆಯಾದರೂ ದೇಶದ ಕ್ರೀಡೆ ಹಾಗೂ ಸೇನೆಗೆ ಕೊಡುಗೆ ಅಪಾರವಾಗಿದೆ. ಹಾಕಿ ಉತ್ಸವವನ್ನು ಪಾಂಡಂಡ ಕುಟ್ಟಣಿ ಅವರು ಹುಟ್ಟು ಹಾಕಿದ ನಂತರ ಕೊಡಗು ಜಿಲ್ಲೆಯ ಕ್ರೀಡಾ ಚಿತ್ರಣವೇ ಬದಲಾಗಿದೆ. ಹಾಕಿ ಉತ್ಸವದ ಪ್ರೇರಣೆಯಿಂದ ಜಿಲ್ಲೆಯ ಇತರ ಜನಾಂಗಗಳು ಸಹ ಕ್ರೀಡಾಕೂಟ ಆಯೋಜಿಸುತ್ತಿವೆ. ಕೇವಲ ಕ್ರೀಡೆಯಾಗಿ ನೋಡದೇ ಹಬ್ಬದಂತೆ ನಡೆಸುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ಕ್ರೀಡಾ ಚಟುವಟಿಕೆಗಳು ಕಾಣುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದರು.
ವೇದಿಕೆಯಲ್ಲಿ ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಮಿಟ್ಟು ಸೋಮಯ್ಯ, ಕೊಡವ ಹಗ್ಗ-ಜಗ್ಗಾಟ ಅಕಾಡೆಮಿ ಅಧ್ಯಕ್ಷ ಪೊನ್ನೋಳತಂಡ ಕಿರಣ್ ಪೊನ್ನಪ್ಪ, ಚೆಟ್ಟಂಗಡ ಕುಟುಂಬದ ಅಧ್ಯಕ್ಷ ವಿಜಯ್ ಕಾರ್ಯಪ್ಪ, ಹಿರಿಯರಾದ ಮಣಿ ನಾಚಪ್ಪ, ಊರ್ ತಕ್ಕ ಹ್ಯಾರಿ, ಶಾಲಾ ಎಸ್ .ಡಿ. ಎಂ. ಸಿ ಅಧ್ಯಕ್ಷೆ ಜ್ಯೋತಿ ಭಾಗವಹಿಸಿದ್ದರು.
ವಿಜಯ್ ಕಾರ್ಯಪ್ಪ ಸ್ವಾಗತಿಸಿ, ಚೆಟ್ಟಂಗಡ ಕುಟುಂಬ ಕಾರ್ಯದರ್ಶಿ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿದರು. ಚೆಟ್ಟಂಗಡ ಕುಟುಂಬದ ಮಹಿಳಾ ತಂಡದಿಂದ ಸ್ವಾಗತ ನೃತ್ಯ, ಬಾಲಕಿ ಲೇಖನಾ ಉತ್ತಪ್ಪ ಅವರಿಂದ ಭರತನಾಟ್ಯ ಗಮನ ಸೆಳೆಯಿತು.
ಪಂದ್ಯಾವಳಿಯ ಅಂಪೈರ್ ಮತ್ತು ತಾಂತ್ರಿಕ ನಿರ್ದೇಶಕರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಕೊಣಿಯಂಡ ಮಂಜು, ಉಳುವಂಗಡ ಲೋಹಿತ್ ಭೀಮಯ್ಯ ಕಾರ್ಯ ನಿರ್ವಹಿಸಿದರು.