

ಮಡಿಕೇರಿ : ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 2571.2 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ವಾಡಿಕೆಯ ಮಳೆ 2227.5 ಮಿ.ಮೀ ಆಗಬೇಕಿತ್ತು. ಅತಿವೃಷ್ಟಿಯ ಕಾರಣಕ್ಕೆ ಜಿಲ್ಲೆಯ 44 ಗ್ರಾಮಗಳು ಪ್ರವಾಹಪೀಡಿತವಾಗಿದ್ದರೆ, 43 ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದೆ. 646 ಜನ ಪ್ರವಾಹದ ಪರಿಣಾಮಕ್ಕೆ ಒಳಗಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ಸುಳುಗಳಲೆಯಲ್ಲಿ ಒಬ್ಬರು ಮತ್ತು ವಿರಾಜಪೇಟೆ ತಾಲೂಕು ಅಮ್ಮತ್ತಿ ಹೊಸಕೋಟೆಯಲ್ಲಿ ಒಬ್ಬರು ಮಳೆಯಿಂದಾಗಿ ಮೃತಪಟ್ಟಿದ್ದಾರೆ.
7 ಚಿಕ್ಕ ಪ್ರಾಣಿಗಳು ಸೇರಿ 42 ಪ್ರಾಣಿಗಳು ಮೃತಪಟ್ಟಿವೆ. 38 ಪ್ರಕರಣಗಳಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. 9 ಮನೆಗಳಿಗೆ ಸಂಪೂರ್ಣ ಹಾನಿ ಸೇರಿದಂತೆ ಒಟ್ಟು 467 ಮನೆಗಳು ಮಳೆಯಿಂದ ಹಾನಿಗೆ ಒಳಗಾಗಿದೆ. 175 ಪ್ರಕರಣಗಳಲ್ಲಿ ಪರಿಹಾರ ಪಾವತಿಸಲಾಗಿದೆ. 82.01 ಹೆ. ಪ್ರದೇಶದಲ್ಲಿ ಕೃಷಿ ಹಾನಿ, 36.2 ಹೆ. ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆಗಳ ಹಾನಿ, 15.16 ಲಕ್ಷ ರೂ.ನಷ್ಟು ಮೀನುಗಾರಿಕೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ 36.19 ಕಿಮೀ, ಪಿಆರ್‌ಇಡಿ ಇಲಾಖೆಯ 997.33 ಕಿಮೀ, ಪಿಎಂಜಿಎಸ್‌ವೆಗೆ ಸಂಬಂಧಿಸಿದ 86.32 ಕಿಮೀ, ಡಿಯುಡಿಸಿಯ 37 ಕಿಮೀ, ರಾಷ್ಟ್ರೀಯ ಹೆದ್ದಾರಿಯ 5 ಕಿಮೀ ರಸ್ತೆ ಮಳೆಯಿಂದ ಹಾಳಾಗಿದೆ. ಇದರಿಂದಾಗಿ ಸುಮಾರು 150 ಕೋಟಿಗೂ ರೂ.ಗೂ ಅಧಿಕ ಮೂಲ ಸೌಕರ್ಯಗಳಿಗೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.
ಸೆಸ್ಕ್‌ಗೆ ಸಂಬಂಧಿಸಿದ 218 ವಿದ್ಯುತ್ ಕಂಬಗಳು, 137 ಟ್ರಾನ್ಸ್‌ಫಾರ್ಮರ್‌ಗಳು, 8.67 ಕಿಮೀ ವಿದ್ಯುತ್ ಮಾರ್ಗ ಹಾನಿಗೊಳಗಾಗಿದೆ. ಇದರಿಂದಾಗಿ 3.5 ಕೋಟಿ ರೂ. ನಷ್ಟವಾಗಿದೆ. 25 ಪ್ರಾಥಮಿಕ ಆರೋಗ್ಯ ಕೇಂದ್ರ, 5 ಕಟ್ಟಡಗಳು, 37 ಪಂಚಾಯಿತಿ ಕಚೇರಿಗಳಿಗೂ ಹಾನಿಯಾಗಿದೆ. ಇದರಿಂದ ಸುಮಾರು 2.25 ಕೋಟಿ ರೂ. ನಷ್ಟವಾಗಿದೆ.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 134 ಸೇತುವೆಗಳು ಹಾಳಾಗಿದೆ. 125 ಕಡೆಗಳಲ್ಲಿ ತಡೆಗೋಡೆಗಳಿಗೂ ಹಾನಿಯಾಗಿದೆ. ಇದರಿಂದಾಗಿ 150.66 ಕೋಟಿ ರೂ.ಗಳ ನಷ್ಟವಾಗಿದೆ. ನಾಲ್ಕು ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳು ಹಾನಿಗೊಳಗಾಗಿದ್ದು, 14 ಲಕ್ಷ ರೂ. ನಷ್ಟವಾಗಿದೆ. ಮಳೆಗೆ 300 ಕೋಟಿ ರೂ. ಅಧಿಕ ನಷ್ಟವಾಗಿದೆ.