ಕೊಟ್ಟಿಗೆಹಾರದಲ್ಲಿ ಕ್ರೈಸ್ತ ಧರ್ಮಕೇಂದ್ರ ಸ್ಥಾಪನೆ

14 mdg 2 cristina
ಕೊಟ್ಟಿಗೆಹಾರ ಪಟ್ಟಣದ ಸೇಕ್ರೆಡ್ ಹಾರ್ಟ್ ಚರ್ಚ್‌ನ ನೂತನ ಧರ್ಮಗುರು ರೆ.ಫಾ. ವಿಲಿಯಂ ಬರ್ನಾರ್ಡ್ ಅವರನ್ನು ಫಾ. ಪ್ರೇಮ್ ಲಾರೆನ್ಸ್ ಡಿಸೋಜ, ಫಾ. ಥಾಮಸ್ ಕಲಘಟಗಿ, ಫಾ. ಅರುಣ್ ಲೋಬೋ ಗೌರವಿಸಿದರು.
Published on

ಮೂಡಿಗೆರೆ: ಕೊಟ್ಟಿಗೆಹಾರ ಪಟ್ಟಣದಲ್ಲಿ ಯೇಸು ಕ್ರಿಸ್ತರ ಪವಿತ್ರ ಹೃದಯದ ಉಪಕೇಂದ್ರವನ್ನು ಮೇಲ್ದರ್ಜೆಗೇರಿಸಿ ನೂತನ ಧರ್ಮ ಕೇಂದ್ರದ ಸ್ಥಾಪನೆ ಮತ್ತು ವಿಶೇಷ ಪೂಜೆ ಸೋಮವಾರ ನಡೆಯಿತು.

ಸಂಸೆ ಗ್ರಾಮದ ಚರ್ಚ್ ಧರ್ಮಗುರು ರೆ.ಫಾ.ಅಂತೋಣಿ ರಾಜ್ ಪೂಜೆ ನೆರವೇರಿಸಿ ಪ್ರಬೋಧನೆ ನೀಡಿ, ಧರ್ಮಗುರುಗಳು ಭಕ್ತರ ಆಧ್ಯಾತ್ಮಿಕ ಚಿಂತನೆಗಳಿಗೆ ನೇತೃತ್ವ ನೀಡುವವರಾಗಿದ್ದಾರೆ. ಧಾರ್ಮಿಕ ಪರಂಪರೆ ಮತ್ತು ನಂಬಿಕೆಗಳಿಗೆ ಪೂಜಾ ಪದ್ಧತಿಯನ್ನು ರೂಪಿಸುತ್ತಾರೆ. ಧಾರ್ಮಿಕ ಕ್ಷೇತ್ರಕ್ಕೆ ಜನರ ಸಹಕಾರ, ಧರ್ಮ ಸಹಿಷ್ಣುತೆ, ಬಾಂಧವ್ಯದೊಂದಿಗೆ ಕ್ರೈಸ್ತ ಧರ್ಮ ಸಾಗಿದೆ. ಈ ಧರ್ಮದ ಪರಂಪರೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಧರ್ಮ ಗುರುಗಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಚಿಕ್ಕಮಗಳೂರು ಧರ್ಮಕ್ಷೇತ್ರದ ಕುಲಪತಿ ರೆ.ಫಾ.ಚಾರ್ಲ್ಸ್ ಪಿರೇರಾ ಮಾತನಾಡಿ, ಕೊಟ್ಟಿಗೆಹಾರವನ್ನು ನೂತನ ಧರ್ಮ ಕೇಂದ್ರವನ್ನಾಗಿ ಮಾಡಲು ಬಿಷಪ್ ಅವರು ಆದೇಶಿಸಿರುವುದರಿಂದ ಧರ್ಮ ಕೇಂದ್ರವಾಗಿದೆ. ಹಿರಿಯರು ಹಿಂದಿನಿಂದಲೂ ಈ ಧರ್ಮಕೇಂದ್ರದಲ್ಲಿ ಧಾರ್ಮಿಕ ಕಾರ್ಯ ಮಾಡುತ್ತ ಬಂದಿದ್ದಾರೆ. ಇಂದಿನ ಪೀಳಿಗೆ ಅದರ ಅಭಿವೃದ್ಧಿಗೆ ಶ್ರಮಿಸಬೇಕು. ನೂತನ ಧರ್ಮಕೇಂದ್ರಕ್ಕೆ ಅನುಭವಿ ಧರ್ಮಗುರುಗಳು ಮುಖ್ಯವಾಗಿದ್ದಾರೆ. ಧರ್ಮ ಕೇಂದ್ರವನ್ನು ಉಳಿಸಿ ಬೆಳೆಸುವುದರಲ್ಲಿ ಕ್ರೈಸ್ತ ಭಕ್ತಾದಿಗಳ ಪಾತ್ರ ಕೂಡ ಮುಖ್ಯ. ಇದರಿಂದ ಧರ್ಮ ಕೇಂದ್ರದ ಪ್ರಗತಿ ಸಾಧ್ಯ ಎಂದು ತಿಳಿಸಿದರು. ಫಾ. ವಿಲಿಯಂ ಬರ್ನಾರ್ಡ್, ಫಾ. ಪ್ರೇಮ್ ಲಾರೆನ್ಸ್ ಡಿಸೋಜ, ಬಣಕಲ್ ಚರ್ಚ್‌ನ ಧರ್ಮಗುರು ಫಾ. ಪ್ರೇಮ್ ಡಿಸೋಜ, ಸಹಾಯಕ ಗುರುಗಳಾದ ಫಾ. ಥೋಮಸ್ ಕಲಘಟಗಿ, ಆಲ್ವಿನ್ ವಿನೋದ್, ಅಲೀಶಾ ನೊರೋನ್ನಾ, ರೇಷ್ಮಾ ಪಿರೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net