ಕೈಯನೈಟ್ ಅದಿರು ಸಾಗಿಸುತ್ತಿದ್ದ ಲಾರಿ ವಶ

IMG-20230729-WA0062
Published on

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಹಂಪಾಪುರ ಶಾಖೆಯ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಿ ಅಕ್ರಮವಾಗಿ ಕೈಯನೈಟ್ ಅದಿರು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಡಿಸಿಎಫ್ ಬಸವರಾಜ್ ಹಾಗೂ ಎಸಿಎಫ್ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ಮಾಲು ಸಮೇತ ಲಾರಿಯನ್ನು ಆರ್‌ಎಫ್‌ಒ ಪ್ರಸನ್ನಕುಮಾರ್ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಶಿವಯೋಗಿ, ಎಸ್.ಕೆ.ಮಹಮ್ಮದ್ ಇದ್ರಿಸ್, ಸಿ.ವೆಂಕಟೇಶ, ವಾಹನ ಚಾಲಕ ಎನ್.ಮಂಜು ಎಂಬುವರ ವಿರುದ್ಧ ಅರಣ್ಯ ಇಲಾಖೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಆರ್‌ಎಫ್‌ಒ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಸುನೀತಾ, ಚಂದನ್, ಬೀಟ್ ಫಾರೆಸ್ಟ್ ಪ್ರಸಾದ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

‘ಅಕ್ರಮ ಗಣಿಗಾರಿಕೆಯಿಂದ ಅರಣ್ಯ ನಾಶ’ ಶೀರ್ಷಿಕೆಯಲ್ಲಿ 2022ರ ಜು. 14ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ತಿಂಗಳು ಗಣಿಗಾರಿಕೆ ಬಂದ್ ಮಾಡಿಸಿದ್ದರು. ನಂತರ ಗಣಿಗಾರಿಕೆ ನಡೆಸುತ್ತಿದ್ದವರು ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತಂದು ಮತ್ತೆ ಗಣಿಗಾರಿಕೆ ಆರಂಭಿಸಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದು ಪತ್ತೆಯಾದ ನಂತರ ಅರಣ್ಯದಲ್ಲಿ ರಸ್ತೆ ಮಾಡಲು ಅನುಮತಿ ಪಡೆದಿರುವ ಬಗ್ಗೆ ದಾಖಲೆ ನೀಡಲು ಗಣಿಗಾರಿಕೆ ಮಾಡುತ್ತಿರುವ ವ್ಯಕ್ತಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಂದ ಯಾವುದೇ ಉತ್ತರ ಬಾರದೆ ಇದ್ದಾಗ ಜು.27ರಂದು ಕಯನೈಟ್ ಅದಿರು ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net