

ಇದು ಆರ್ಥಿಕ ಬೆಳವಣಿಗೆಯ ಪೂರಕ ಬಜೆಟ್ ಆಗಿದೆ. ಆದಾಯ ತೆರಿಗೆ 12 ಲಕ್ಷ ರೂ. ವರೆಗೆ ವಿನಾಯಿತಿ ನೀಡಿರುವದು ಮದ್ಯಮ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ತಿಳಿಸಿದ್ದಾರೆ.
ದೇಶದ 50 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿರುವುದು, 120 ಹೊಸ ವಿಮಾನ ನಿಲ್ದಾಣ ಘೋಷಣೆ, ಹೋಮ್ ಸ್ಟೇಗಳಿಗೆ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಯೋಜನೆಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಎಂಎಸ್‌ಎಂಇ ಕೈಗಾರಿಕೆಗಳ ರಫ್ತು ಅಭಿವೃದ್ಧಿಗೆ ಒತ್ತು ನೀಡಿರುವುದು ಕೈಗಾರಿಕಾ ವಲಯದಲ್ಲಿ ಸ್ವಲ್ಪ ಆಶಾದಾಯಕವಾಗಿದೆ. ಎನ್‌ಆರ್‌ಐ ಉದ್ಯಮಗಳಿಗೆ ವಿಶೇಷ ಯೋಜನೆ, ಸ್ಟಾರ್ಟ್ ಅಪ್‌ಗಳಿಗೆ ಒತ್ತು ನೀಡಿರುವುದು ಹಾಗೂ ವಿಮೆದಾರರಿಗೆ ವಿದೇಶಿ ನೇರ ಹೂಡಿಕೆಗೆ ಒತ್ತು ನೀಡಿರುವುದರಿಂದ ವಿದೇಶಿ ಬಂಡವಾಳಗಳು ಹೆಚ್ಚಾಗುವ ಜತೆಗೆ ಉದ್ಯೋಗಾವಕಾಶ ಸಿಗಬಹುದು. ಎಸ್ಸಿ, ಎಸ್ಟಿ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ. ಸಾಲ ವಿಸ್ತರಣೆ ಮಾಡಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗಗಳಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್‌ಗಳ ಸೌಲಭ್ಯ ಘೋಷಿಸಿರುವುದು ಸ್ವಾಗತಾರ್ಹ. ಬಟ್ಟೆ ಯಂತ್ರಗಳು, ಕ್ಯಾನ್ಸರ್ ಔಷಧಗಳ ಮೇಲೆ ಸಂಪೂರ್ಣ ಕಸ್ಟಮ್ ಡ್ಯೂಟಿ ಕಡಿತ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ.