ಕೈ ಹಗರಣಗಳ ಡಾನ್ ಯಾರು?

MLC K.S.Naveen
Published on

ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಹಗರಣಗಳ ಡಾನ್ ಯಾರು ಎಂದು ಎಂಎಲ್ಸಿ ಕೆ.ಎಸ್.ನವೀನ್ ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಬಿ.ನಾಗೇಂದ್ರ ಅವರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆದಿದ್ದಾರೆ. ಮುಡಾ ಹಗರಣದಲ್ಲಿ ತಮ್ಮ ಆಪ್ತ ಕೆ.ಮರೀಗೌಡರಿಂದ ರಾಜೀನಾಮೆ ಕೊಡಿಸಿದ್ದಾರೆ. ಹಾಗಾದರೆ, ಭ್ರಷ್ಟಾಚಾರದ ಡಾನ್ ಯಾರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಸಿಎಂ ಅನೇಕ ಹಗರಣಗಳ ರೂವಾರಿ. ಆದರೂ ಬೇರೆಯವರಿಂದ ರಾಜೀನಾಮೆ ಕೊಡಿಸುತ್ತಿದ್ದು, ತಾವು ಮಾತ್ರ ನೀಡುತ್ತಿಲ್ಲ. ವಾಲ್ಮೀಕಿ ಸಮುದಾಯದ ಹಣ ಲೂಟಿ ಹೊಡೆದ ಈ ಸರ್ಕಾರಕ್ಕೆ ಜಯಂತಿ ಆಚರಿಸಲು, ಭಾಗವಹಿಸಲು ನೈತಿಕತೆ ಇಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಅವರು ವಾಲ್ಮೀಕಿ ಪ್ರತಿಮೆ ಮುಂದೆ ನಿಂತು ಸಮುದಾಯದ ಕ್ಷಮೆಯಾಚಿಸಬೇಕು. ಅಲ್ಲದೆ, ಕೂಡಲೇ ರಾಜೀನಾಮೆ ನೀಡಬೇಕು. ರಾಜ್ಯದ ಹಲವೆಡೆ ವಾಲ್ಮೀಕಿ ನಾಯಕ ಸಮಾಜದವರು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಅಭಿವೃದ್ಧಿಗೆ ಬಳಸುವ ಅನುದಾನವೇ ದುರುಪಯೋಗ ಮಾಡಿಕೊಳ್ಳಲಾಗಿದೆ. ಸ್ವತಃ ಸಿಎಂ ಹಗರಣ ಒಪ್ಪಿಕೊಂಡಿದ್ದರೂ ಹಣ ವಾಪಸ್ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದ ವೇಳೆ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದರು. ಬಿಜೆಪಿ ತನ್ನ ಅವಧಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದೆ. ಆದರೆ, ಕಾಂಗ್ರೆಸ್ ನಿಗಮದ ಹಣವನ್ನೇ ಚುನಾವಣೆಗೆ ಬಳಸಿಕೊಂಡಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ರಾಜವೀರ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ 30 ಎಕರೆ ಭೂಮಿ ಮಂಜೂರು ಮಾಡಿದರೆ, ಕೇಂದ್ರ ಸರ್ಕಾರ ಆಕರ್ಷಕವಾಗಿ ನಿರ್ಮಿಸಲು ಸಿದ್ಧವಿದೆ. ಈ ಕುರಿತು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ಮುಖಂಡರಾದ ಮಾಧುರಿ ಗಿರಿ, ದಗ್ಗೆ ಶಿವಪ್ರಕಾಶ್, ಪಾಪೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net