ಕೈ ನಾಯಕರಿಂದ ಹಿಂದು ವಿರೋಧಿ ನೀತಿ

BJP
Published on

ಚಿತ್ರದುರ್ಗ: ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಈ ವೇಳೆ ಕೈ ನಾಯಕರು ಧರ್ಮ-ಧರ್ಮಗಳ ಮಧ್ಯೆ ದ್ವೇಷ ಭಾವನೆ ಮೂಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ, ಎಂಎಲ್ಸಿ ಕೆ.ಎಸ್.ನವೀನ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಹಿಂದು ವಿರೋಧಿ ನೀತಿ, ತುಷ್ಟೀಕರಣ, ಕಾರ್ಯಕರ್ತರ ಮೇಲೆ ಕಿರುಕುಳ ನೀಡುವುದನ್ನು ಮೊದಲಿನಿಂದಲೂ ಕಾಂಗ್ರೆಸ್ ಮಾಡುತ್ತ ಬಂದಿದೆ ಎಂದು ದೂರಿದರು.

ಕರಸೇವಕರ ಬಂಧನ, ದತ್ತಪೀಠದ ಹಳೆಯ ಪ್ರಕರಣ ಹೀಗೆ.. 3 ದಶಕಗಳ ಹಿಂದಿನ ಪ್ರಕರಣಗಳನ್ನು ಈಗ ರೀ ಓಪನ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮೆಚ್ಚಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈ ನಾಯಕರಾದ ಬಿ.ಕೆ.ಹರಿಪ್ರಸಾದ್, ಉಗ್ರಪ್ಪ, ಯತೀಂದ್ರ ಸಿದ್ದರಾಮಯ್ಯ, ಎಚ್.ಆಂಜನೇಯ ಇತರರ ಹೇಳಿಕೆ ಶಾಂತಿ ಕದಡಲು ಕುಮ್ಮಕ್ಕು ನೀಡುವಂತಿವೆ. ಗೋದ್ರಾ ಹತ್ಯಾಕಾಂಡ ಸಂಬಂಧ ಪ್ರಚೋದನಕಾರಿ ಹೇಳಿಕೆ ಪ್ರಸ್ತಾಪಿಸಿದ್ದು, ಹಿಂದುಗಳ ದಮನಕ್ಕೆ ಷಡ್ಯಂತ್ರ ರೂಪಿಸಿದಂತಿದೆ. ಎಷ್ಟೇ ಪ್ರಯತ್ನಿಸಿದರೂ ಪುಟಿದೇಳುವ ಶಕ್ತಿ ಹಿಂದುಗಳಲ್ಲಿದೆ. ಕೆಟ್ಟ ರಾಜಕೀಯ ಮೊದಲು ಕೈಬಿಡಿ. ದೇಶದ ಪ್ರತಿಯೊಬ್ಬ ಹಿಂದುವಿನ ಭಾವನೆ ಕೆರಳಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಶಾಸಕರ ಸ್ಥಳೀಯ ಅಭಿವೃದ್ಧಿಗೆ ಬಿಡುಗಡೆ ಆಗಿರುವುದು ಕೇವಲ 50ಲಕ್ಷ ರೂ. ಮಾತ್ರ. ಹೀಗಾಗಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಬರ ಪರಿಹಾರ, ನಿರ್ವಹಣೆ, ನಾಡಿನ ಪ್ರಗತಿ ವಿಚಾರದಲ್ಲಿ ಸಂಪೂರ್ಣ ಸೋತಿದೆ ಎಂದು ದೂರಿದರು.

ಜಿಲ್ಲೆ, ವಿಭಾಗ, ರಾಜ್ಯಮಟ್ಟದಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಲು ಈವರೆಗೆ ಪಕ್ಷ ಅನುವು ಮಾಡಿಕೊಟ್ಟಿದೆ. ಸರಿಯಾಗಿ ಕೆಲಸ ಮಾಡಿದರೆ ಸ್ಥಾನಮಾನ ಹುಡುಕಿಕೊಂಡು ಬರಲಿವೆ. ಸಾರ್ವಜನಿಕರ ಅನೇಕ ಸಮಸ್ಯೆಗಳ ಕುರಿತು ಗಮನ ಸೆಳೆಯಲು ನೀಡಿರುವ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಜಿಲ್ಲಾಧ್ಯಕ್ಷ ಎ.ಮುರಳಿ, ಪದಾಧಿಕಾರಿಗಳಾದ ನವೀನ್ ಚಾಲುಕ್ಯ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net