

ಶಿಕ್ಷಣ, ಆಡಳಿತ ಹಾಗೂ ವ್ಯವಹಾರದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗಬೇಕು. ಜತೆಗೆ ಕನ್ನಡವನ್ನು ಅನ್ನದ ಭಾಷೆಯಾಗಿಸಬೇಕು ಎಂದು ವಿಜಯವಾಣಿ ದಿನಪತ್ರಿಕೆಯ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಹೇಳಿದರು.
ನಗರದ ಸಿದ್ಧಾರ್ಥ ಬಡಾವಣೆಯ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ಸವ, ಭಾಷಣಗಳಿಂದ ಕನ್ನಡ ಉಳಿಯುವುದಿಲ್ಲ. ಮುಖ್ಯವಾಗಿ ಶಿಕ್ಷಣದಲ್ಲಿ ಕನ್ನಡ ಉಳಿಯಬೇಕು. ಕನಿಷ್ಠ 5ನೇ ತರಗತಿ ವರೆಗೆ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ಮಾತೃ ಭಾಷೆಯಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು. ಕನ್ನಡಿಗರಾಗಿ ನಾವೇ ಕನ್ನಡವನ್ನು ಪ್ರೀತಿಸದೆ ಇದ್ದರೆ ಬೇರೆ ಭಾಷಿಗರು ಯಾಕೆ ಪ್ರೀತಿಸಬೇಕು ಎಂದು ಪ್ರಶ್ನಿಸಿದರು.
ಖಾಸಗಿ ವಲಯದಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ಕಲ್ಪಿಸಬೇಕು. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಸರ್ಕಾರ ಯೋಚಿಸಬೇಕು. ರೈಲ್ವೇ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕ್, ನ್ಯಾಯಾಲಯಗಳಲ್ಲಿ ಖಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಒತ್ತಾಯಿಸಿದರು.
ಒಂದು ಕಡೆ ಹಿಂದಿ ಹೇರಿಕೆ ಹೆಚ್ಚಾದೆ. ಮೊದಲು ಕನ್ನಡ ಕಲಿಯಬೇಕು. ಮಾತೃ ಭಾಷೆಯನ್ನು ಸ್ಪೀಕರಿಸಿದ ಬಳಿಕ ಬೇರೆ ಎಲ್ಲ ಭಾಷೆಗಳನ್ನು ಕಲಿಸಬೇಕು. ಕನ್ನಡ ಮರೆತ್ತಿರುವುದರಿಂದ ಇಂದಿನ ಬಹುತೇಕ ಮಕ್ಕಳು ಸರಿಯಾಗಿ ಕನ್ನಡ ಕಲಿಯದೆ ಇಂಗ್ಲಿಷನ್ನೂ ಕಲಿಯದೆ ಅತಂತ್ರರಾಗುತ್ತಿದ್ದಾರೆ. ಹೀಗಾಗಿ ಮಕ್ಕಳು ತಮ್ಮ ಭಾವನೆಗಳನ್ನು ಹೇಳಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಶೇ.30 ರಷ್ಟೂ ಕನ್ನಡ ಬಳಕೆ ಇಲ್ಲವಾಗಿದೆ. ವಲಸೆ ಬಂದ ಅನ್ಯ ಭಾಷಿಗರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಛಾಯಾಗ್ರಾಹಕ ವಿ.ಜಿ.ಶ್ರೀಧರ್, ಆರ್.ಜೆ.ರಶ್ಮಿ ಅವರಿಗೆ ಶಾಂತಲಾ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಡಳಿತ ಸಮಿತಿ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಕುಮಾರ್, ಪ್ರಾಂಶುಪಾಲ ಡಿಂಬಲ್ ಸೆಬಾಸ್ಟಿಯನ್ ಇತರರಿದ್ದರು.