ಕೇಂದ್ರಕ್ಕೆ ಹಿಂದಿ, ಇಂಗ್ಲಿಷಲ್ಲೇ ದೂರು ಸಲ್ಲಿಸಬೇಕಂತೆ!; ಯೋಜನಾ, ಸಾಂಖ್ಯಿಕ ಇಲಾಖೆ ಅಧಿಕಾರಿಯ ಉಡಾಫೆ

Kannada
ಕನ್ನಡದಲ್ಲಿ ಸಲ್ಲಿಸಿದ್ದ ದೂರಿನ ಪ್ರತಿ
Published on

| ಎಲ್. ರೂಪೇಶ್ ಬಂಗಾರಪೇಟೆ (ಕೋಲಾರ)

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿರುವ ದೇಶದಲ್ಲಿ ಈಗಲೂ ಪ್ರಾದೇಶಿಕ ಭಾಷೆಗಳ ಕಡೆಗಣನೆೆ ಮುಂದುವರಿದಿರುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ. ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಈಗಲೂ ಕನ್ನಡ ಅಧಿಕೃತ ಭಾಷೆಯಲ್ಲ ಎಂಬ ಆಘಾತಕಾರಿ ಸಂಗತಿ ಪತ್ರವೊಂದರಿಂದ ಬಹಿರಂಗವಾಗಿದೆ.

ದೆಹಲಿಯ ಪ್ರಮುಖ ಅಧಿಕಾರಿ ಯೊಬ್ಬರು ಕನ್ನಡ ಅಧಿಕೃತ ಭಾಷೆಯೇ ಅಲ್ಲ, ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಪತ್ರ ಬರೆದರೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ದೆಹಲಿಯ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಇಲಾಖೆಯ ನಿರ್ದೇಶಕ ಲಾಲ್​ಟ್ಲಾನಾ ಚನ್ನಾಘಟೆ ಎಂಬುವರು ಕನ್ನಡಿಗನ ದೂರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಕನ್ನಡವನ್ನು ಕಡೆಗಣಿಸಿರುವುದು ಅವರು ನೀಡಿರುವ ಲಿಖಿತ ಉತ್ತರದಲ್ಲಿ ಸ್ಪಷ್ಟವಾಗಿದೆ.

ಅಧಿಕಾರಿಯ ಈ ಉತ್ತರಕ್ಕೆ ಸರ್ಕಾರದ ಹಳೆಯ ಕಾನೂನೊಂದು ಆಧಾರವಾಗಿದೆ. ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರೇ ‘ಭಾಷಾ ವೈವಿಧ್ಯ ದೇಶದ ಹೆಮ್ಮೆ, ಆ ಭಾಷೆಗಳೆಲ್ಲ ಪೂಜನೀಯ’ ಎಂದಿದ್ದಾರೆ. ಸಂಸತ್ತಿನಲ್ಲಿ ಜನಪ್ರತಿನಿಧಿಗಳಿಗೆ ಆಯಾ ಭಾಷೆಯಲ್ಲಿಯೇ ಮಾತನಾಡಲು ಹಾಗೂ ಅವುಗಳನ್ನು ಬೇರೆ ಸದಸ್ಯರ ಭಾಷೆಗೆ ತರ್ಜುಮೆ ಮಾಡುವ ಅವಕಾಶವಿದೆ. ಆದರೆ, ದೇಶದ ಪ್ರಜೆಯೊಬ್ಬ ಮಾತೃಭಾಷೆಯಲ್ಲಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನುವುದು ವಿಪರ್ಯಾಸವಾಗಿದೆ. ಆ ಸಂಬಂಧ ಅಗತ್ಯ ತಿದ್ದುಪಡಿಗೆ ಕೇಂದ್ರ ಸರ್ಕಾರ ಇನ್ನೂ ಏಕೆ ಮನಸ್ಸು ಮಾಡಿಲ್ಲ, ಇದು ಸಹ ಹಿಂದಿ ಹೇರಿಕೆಯ ಭಾಗವೇ ಎಂಬ ಚರ್ಚೆಗೆ ಈ ಘಟನೆ ಗ್ರಾಸವಾಗಿದೆ.

ಘಟನೆ ಏನು?: ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಗ್ರಾಮದಲ್ಲಿ ಸಂಸದರ ನಿಧಿಯ ಬಳಕೆಯಲ್ಲಿ ಅವ್ಯವಹಾರವಾಗಿದೆ ಎಂದು ತೊಪ್ಪನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಎಂಬುವರು ಪ್ರಧಾನ ಮಂತ್ರಿಯವರಿಗೆ ಕನ್ನಡದಲ್ಲಿ ದೂರು ನೀಡಿದ್ದರು. ಈ ದೂರಿಗೆ ಸಾಂಖ್ಯಿಕ ಮತ್ತು ಯೋಜನಾ ಇಲಾಖೆ ನಿರ್ದೇಶಕರು ಲಿಖಿತ ಉತ್ತರ ನೀಡಿ, ‘ಕನ್ನಡ ಭಾಷೆ ದೆಹಲಿಯಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಯಲ್ಲಿ ಅಧಿಕೃತ ಭಾಷೆಯಲ್ಲ. ನಿಮ್ಮ ದೂರುಗಳೇನೇ ಇದ್ದರೂ ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಸಲ್ಲಿಸಬೇಕು’ ಎಂದು ದೂರುದಾರರಿಗೆ ಮಿಂಚಂಚೆ ಕಳಿಸಿದ್ದಾರೆ. ಹಾಗೆಯೆ ದೂರನ್ನೂ ಇದೇ ನೆಪ ಇಟ್ಟುಕೊಂಡು ವಿಲೇ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ರೆಡ್ಡಿ, ಕೇಂದ್ರ ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಕನ್ನಡ ಬಾರದಿದ್ದರೆ ಕನ್ನಡದಲ್ಲಿ ಬರುವ ದೂರು ಅಥವಾ ಪತ್ರಗಳನ್ನು ಅನುವಾದಿಸಿಕೊಳ್ಳುವ ವ್ಯವಸ್ಥೆ ಇದೆ.

ಆದರೆ, ಇವರ ಸೋಮಾರಿತನದಿಂದ ದೂರನ್ನೇ ವಜಾ ಮಾಡಿದ್ದಾರೆ. ಸಂವಿಧಾನಕ್ಕೂ ಅಪಚಾರ ಮಾಡಿದ್ದಾರೆ. ದೂರನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲೇ ಬರೆಯಬೇಕೆಂದು ಹೇಳಿರುವುದು ಕನ್ನಡಕ್ಕೆ ಮಾಡಿದ ಅಪಮಾನವಾಗಿದೆ ಎಂದಿದ್ದಾರೆ.

ದೆಹಲಿಯಲ್ಲಿ ದನಿ ಎತ್ತಲಿದೆ ಕಸಾಪ

ದೆಹಲಿ ಅಧಿಕಾರಿಯ ಕನ್ನಡ ಅವಗಣನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಗಂಭೀರವಾಗಿ ಪರಿಗಣಿಸಿದೆ. ಹಿಂದಿ- ಇಂಗ್ಲಿಷ್​ನಲ್ಲಿ ಮಾತ್ರ ದೂರು ಕೊಡಬೇಕೆಂದು ಕೇಂದ್ರದ ಅಧಿಕಾರಿ ಉತ್ತರಿಸಿದ್ದು ಘೋರವಾದ ತಪ್ಪು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಸರ್ಕಾರದಲ್ಲಿ ಎಲ್ಲಿಯೇ ಆದರೂ ಯಾವುದೇ ಭಾಷೆಯಲ್ಲಿ ವ್ಯವಹರಿಸಿದರೂ ಅನುವಾದ ಮಾಡುವ ವ್ಯವಸ್ಥೆ ಇದೆ. ಸಂಸತ್​ನಲ್ಲಿ ಕನ್ನಡದಲ್ಲಿ ಮಾತನಾಡಿದರೆ ಅನುವಾದ ಮಾಡುವ ಸೌಲಭ್ಯ ಹೊಂದಿರುತ್ತದೆ. ಈ ದೂರನ್ನೂ ಅನುವಾದ ಮಾಡಿ ತೆಗೆದುಕೊಳ್ಳಬಹುದಿತ್ತು ಎಂದಿದ್ದಾರೆ.

ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ದೂರು ಕಳಿಸಿ ಎಂದು ಸೂಚಿಸಿರುವುದು ಅಕ್ಷಮ್ಯ, ಕನ್ನಡ ಸಂವಿಧಾನದಲ್ಲಿ ಮನ್ನಣೆ ಪಡೆದ ಭಾಷೆ. ಕನ್ನಡದಲ್ಲಿ ದೂರು ನೀಡುವ ಹಕ್ಕು ಇದೆ. ಎಲ್ಲರಿಗೂ ಹಿಂದಿ, ಇಂಗ್ಲಿಷ್ ಭಾಷೆ ಗೊತ್ತಿರಬೇಕೆಂಬುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ನಾನೂ ಸಹ ಕಾರ್ಯದರ್ಶಿಗೆ ಪತ್ರ ಬರೆದು ಪ್ರಶ್ನೆ ಮಾಡುತ್ತೇನೆ. ಮುಂದೆ ದೆಹಲಿಗೆ ಹೋದಾಗ, ಈ ರೀತಿ ಸಮಸ್ಯೆಗೆ ವೈಯಕ್ತಿಕವಾಗಿ ಭೇಟಿ ಕೊಟ್ಟು ಸಮಸ್ಯೆ ಪರಿಹಾರ ಮಾಡಲು ಪ್ರಯತ್ನ ಮಾಡುವೆ ಎಂದು ಮಹೇಶ್ ಜೋಶಿ ಹೇಳಿದರು.

ಸಂವಿಧಾನ ತಿದ್ದುಪಡಿಯಾಗಲಿ

ಭಾಷಾ ಕಾಯ್ದೆ ಏನು ಹೇಳುತ್ತದೆ ಎಂಬುದು ಮುಖ್ಯವಾಗುತ್ತದೆ. ದೆಹಲಿಯಲ್ಲಿ ಕೇಂದ್ರದ ಸ್ವಾಮ್ಯದ ಕಚೇರಿಯಲ್ಲಿ ಹಿಂದಿ, ಇಂಗ್ಲಿಷ್ ಭಾಷೆಯಲ್ಲೇ ವ್ಯವಹರಿಸಬೇಕೆಂದಿದೆ. ಆದರೆ, ಬಹುಭಾಷಾ ಭಾರತ ಇದು. 22 ಭಾಷೆಗಳಿಗೆ ಸಮಾನ ಅವಕಾಶಗಳನ್ನು ಕೊಡಬೇಕು. ಅದನ್ನು ಮೊದಲಿನಿಂದ ಹೇಳುತ್ತಿದ್ದೇನೆ. ಬೇರೆ ಬೇರೆ ಕಾರಣಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಲಾಗಿದೆ. ಭಾಷೆ ವಿಚಾರಕ್ಕೆ ಏಕೆ ಮಾಡುವುದಿಲ್ಲ? ಕೇಂದ್ರ ಸರ್ಕಾರ ಈ ಬಗ್ಗೆ ಮಹತ್ವದ ತಿದ್ದುಪಡಿ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದ್ದಾರೆ.

ಪ್ರಧಾನಿ ಕಚೇರಿಗೆ ದೂರು: ಕನ್ನಡದಲ್ಲಿ ದೂರು ಕೊಟ್ಟಿದ್ದಕ್ಕೆ ದೂರನ್ನೇ ವಜಾ ಮಾಡಿರುವುದರ ವಿರುದ್ಧ ಮಲ್ಲಿಕಾರ್ಜುನ ರೆಡ್ಡಿ ಪ್ರಧಾನಿ ಕಚೇರಿಗೆ ಮರು ದೂರು ನೀಡಿದ್ದು, ಉತ್ತರ ಎದುರು ನೋಡುತ್ತಿದ್ದಾರೆ.

ಸಂವಿಧಾನ ಹೇಳೋದೇನು?: ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ಸ್ಪಷ್ಟವಾಗಿ ವಿವರಿಸುತ್ತದೆ. ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. 344ನೇ ವಿಧಿಯಲ್ಲಿ ಹಿಂದಿಯ ಜತೆಗೆ ಬೇರೆ ಬೇರೆ ರಾಜ್ಯಗಳ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ವಿವರಿಸಲಾಗಿದೆ. ರಾಜ್ಯಗಳು ಪರಸ್ಪರ ವ್ಯವಹರಿಸುವಾಗ ಅಥವಾ ಕೇಂದ್ರದ ಜತೆ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಈ 22 ಭಾಷೆಗಳನ್ನು ಬಳಸಬಹುದು ಎಂದು 344(1)ರಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net