ಕೇಂದ್ರ ಸರ್ಕಾರದಿಂದ ಇ.ಡಿ. ದುರ್ಬಳಕೆ

mysore
Published on

ಕೇಂದ್ರ ಸರ್ಕಾರ ಇ.ಡಿ.ಯಂತಹ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಗೃಹ ಸಚಿವ ಡಾ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೇಲೆ ತನಿಖೆ ನಡೆಸಬೇಕು. ಆದರೆ ಇ.ಡಿ.ಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಾ.ಪರಮೇಶ್ವರ್ ಅವರು ತಮ್ಮ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದಾರೆ. ಇ.ಡಿ. ದಾಳಿ ಮಾಡಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದುವರೆಗೆ ಕೇಂದ್ರ ಸರ್ಕಾರ 28,878 ಇಡಿ ದಾಳಿ ಮಾಡಿದೆ. ಅದರಲ್ಲಿ 992 ಪ್ರಕರಣಗಳಿಗೆ ಮಾತ್ರ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ಶಿಕ್ಷೆ ಆಗಿರುವು 23 ಪ್ರಕರಣಗಳಲ್ಲಿ ಮಾತ್ರ ಎಂದರು.

ಶೇ.98 ರಷ್ಟು ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದ್ದಾರೆ. ಏಳೆಂಟು ದಲಿತ ಮುಖಂಡರನ್ನು ಲಿಸ್ಟ್ ಮಾಡಿದ್ದು, ಇವರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವ ಸಾಧ್ಯತೆ ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರಲ್ಲ ಎಂದು ಹೀಗೆಲ್ಲ ಮಾಡುತ್ತಿದ್ದಾರೆ. ರನ್ಯಾ ರಾವ್ ವಿಚಾರದಲ್ಲಿ ಬಿಜೆಪಿ ಐಟಿ ಸೆಲ್ ಅಥವಾ ಇಡಿ ಅವರು ಪ್ರಚಾರ ಮಾಡಿದ್ದಾರಾ? ನಾವೆಲ್ಲರೂ ಡಾ. ಪರಮೇಶ್ವರ್ ಜತೆಗಿರುತ್ತೇವೆ ಎಂದರು.

ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ. ಒಬ್ಬ ಸಕ್ರಿಯ ರಾಜಕಾರಣದಲ್ಲಿರುವ ಮುತ್ಸದ್ದಿ ರಾಜಕಾರಣಿಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ. ಆತನಿಗೆ ದಲಿತ ಸಮುದಾಯದ ಜನ ತಕ್ಕ ಬುದ್ಧಿ ಕಲಿಸಬೇಕು ಎಂದರು.

ಪಹಲ್ಗಾಮ್ ಅಟ್ಯಾಕ್ ಅಂತ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದೀರಿ. ಅಂತಹ ವಿಚಾರಗಳನ್ನು ನಾವು ಪ್ರಶ್ನೆ ಮಾಡೋದೆ ತಪ್ಪಾ? ಮಾಹಿತಿ ಕೇಳೋದೆ ತಪ್ಪಾ? ಸೀಸ್‌ಫೈರ್ ಯಾವಾಗ, ಯಾಕೆ ಘೋಷಣೆ ಮಾಡಿದ್ರಿ ಅಂತ ಕೇಳೋದೆ ತಪ್ಪಾ? ಪ್ರಶ್ನೆ ಮಾಡಿದರೆ ನಾವು ದೇಶದ್ರೋಹಿಗಳಾ? ಕೊಂದೊರು ಯಾರು ಅಂತ ಇನ್ನು ಕಂಡುಹಿಡಿದಿಲ್ಲ ಎಂದು ಟೀಕಿಸಿದರು.

ಪ್ರತಾಪ್ ಸಿಂಹನಿಗೆ ಬಿಜೆಪಿಯಲ್ಲೇ ನಯಾಪೈಸೆ ಬೆಲೆ ಇಲ್ಲ, ಬಿಜೆಪಿ ಕಚೇರಿಗೂ ಸೇರಿಸಲ್ಲ. ನಾನು ಐದು ಬಾರಿ ಸೋತಿದ್ದರೂ ನಾನು ಕಾಂಗ್ರೆಸ್ ಕಚೇರಿಯಲ್ಲಿ ಕೂತು ಪ್ರೆಸ್‌ಮೀಟ್ ಮಾಡುತ್ತೇನೆ. ನನಗೆ ನಮ್ಮ ಪಕ್ಷದ ಮುಖಂಡರು ಬೆಲೆ ಕೊಡ್ತಾರೆ. ಬಿಜೆಪಿ ಕಚೇರಿಯಲ್ಲಿ ಕೂರಲು ಆತನಿಗೆ ಜಾಗ ಕೊಡಲ್ಲ. ನಿನಗೆ ಮೂರು ಕಾಸಿನ ಬೆಲೆ ಕೊಡಲ್ಲ. ನೀನು ಅಚಾನಕ್ಕಾಗಿ ಎರಡು ಬಾರಿ ಗೆದ್ದು ಬಂದಿದ್ದೀಯಾ. ನೀನು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತೀಯಾ? ಅವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net