

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು. ಜಡಿ ಮಳೆಯ ನಡುವೆಯೂ ಪ್ರತಿಭಟನಾಕಾರರು ನಗರದ ಶಿಡ್ಲಘಟ್ಟ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿದರು.
ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಮಾಲೀಕರ ಹಿತವನ್ನು ಕಾಪಾಡುವ ಉದ್ದೇಶದಿಂದ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಕಾರ್ಮಿಕರನ್ನು ಗುಲಾಮರನ್ನಾಗಿಸುತ್ತಿದೆ, ಜನವಿರೋಧದ ನಡುವೆಯೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುತ್ತಿದೆ ಎಂದು ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಮಾರಕವಾಗಿರುವ ಸಂಹಿತೆಯ ಹಿಂಪಡೆಯುವಿಕೆ, ಖಾಸಗೀಕರಣಕ್ಕೆ ಕಡಿವಾಣ, ಸರ್ಕಾರಿ ಸ್ವಾಮ್ಯದ ಸಂಸ್ಥೆ ಸಿಬ್ಬಂದಿಗೆ ಉದ್ಯೋಗ ಭದ್ರತೆ ಮತ್ತು ವಿಶೇಷ ಭತ್ಯೆ ಸೇರಿ ಹಲವು ಸವಲತ್ತುಗಳ ಒದಗಿಸುವಿಕೆ, ಬಡ ಕುಟುಂಬಗಳಿಗೆ ಹೆಚ್ಚುವರಿ ತಿಂಗಳಿಗೆ 10 ಕೆ.ಜಿ.ಅಕ್ಕಿ ವಿತರಣೆ, ಸರ್ಕಾರಿ ನೌಕರರ ಎನ್‌ಪಿಎಸ್ ವಿಮೆ ರದ್ದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಕಾರ್ಯದರ್ಶಿ ಕೆ.ಆರ್.ಮಂಜುಳಾ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಮುನಿರತ್ನ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಹಾಸ್ಟೆಲ್ ನೌಕರರ ಸಂಘದ ಅಧ್ಯಕ್ಷ ಕದಿರಪ್ಪ, ಮುಖಂಡರಾದ ನವೀಣ್, ಸುಮಿತ್ರಾ, ಜಿ.ಎಸ್.ಪದ್ಮಾ, ಗಾಯಿತ್ರಿ, ಗೋಪಾಲ್, ಲಕ್ಷ್ಮಮ್ಮ, ಭಾಗ್ಯಾ ಮತ್ತಿತರರು ಇದ್ದರು.