

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ನನಗೇನೂ ಗೊತ್ತಿಲ್ಲ(I don't know the change of KPCC president). ದೆಹಲಿ ನಾಯಕರಿಂದಲೂ ಆ ಬಗ್ಗೆ ಮಾಹಿತಿ ಗೊತ್ತಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಯಾವ ಮಾಹಿತಿಯೂ ನನ್ನ ಬಳಿ ಇಲ್ಲ. ಎರಡು ವರ್ಷ ಯಾಕೆ, ಡಿಕೆಶಿ ಐದು ವರ್ಷ ಸಿಎಂ ಆಗಲಿ ಎಂದು ಮಾರ್ಮಿಕ ಮಾತನ್ನಾಡಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದು ಅವರ ಹೇಳಿಕೆ. ಅವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯೆ ನೀಡಲಿ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪಂಗಡದ ಶಾಸಕರ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಾಯಕರಿಗೆ ತಿಳಿಸಿ ಸಭೆ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಗೌರವ ಕೊಡುತ್ತೇವೆ. ಹೈಕಮಾಂಡ್ ಹೇಳಿದ ಮೇಲೆ ನಾವು ಕೇಳಬೇಕು ಅಲ್ವಾ? ಎಂದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಬರಲಿ. ಅವರು ಬಂದ ಮೇಲೆ ಮಾತನಾಡುತ್ತೇವೆ. ದೂರವಾಣಿಯಲ್ಲೂ ನಾನು ಯಾವ ಕಾರಣಕ್ಕೆ ಸಭೆ ಮಾಡಲು ಉದ್ದೇಶಿಸಿದ್ದೇವೆ ಎಂಬುದನ್ನು ಹೇಳಿದ್ದೆ. ಅವರ ಗಮನಕ್ಕೆ ತಂದು ಮಾಡಬೇಕು. ನಾವೆಲ್ಲ ಅದೇ ರೀತಿ ಮಾಡುತ್ತೇವೆ ಎಂದು ಹೇಳಿದರು.
ನಕ್ಸಲ್ ಶಸ್ತ್ರಾಸ್ತ್ರ ಪತ್ತೆ ವಿಚಾರ ಕುರಿತ ಪ್ರಶ್ನೆಗೆ, ಕೆಲವು ಸಿಕ್ಕಿರುವ ಬಗ್ಗೆ ಮಾಹಿತಿ ಬಂದಿದೆ. 56 ಕಂಟ್ರಿಮೇಡ್ ಪಿಸ್ತೂಲ್ ಕೂಡ ಸಿಕ್ಕಿದೆ. ಇನ್ನೂ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಜಿಎಸ್ಟಿ ಬಾಕಿ ತಾರತಮ್ಯ ವಿಚಾರದಲ್ಲಿ ನಾವು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ಜಿಎಸ್ಟಿ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅದಕ್ಕೆ ಪೂರಕವಾಗಿ ಕೊಡಿ ಎಂದು ಕೇಳುತ್ತಲೇ ಇದ್ದೇವೆ. ರಸ್ತೆಗಳಾಗಬೇಕು, ಅಭಿವೃದ್ಧಿಯಾಗಬೇಕು. ಜಿಎಸ್ಟಿ ಬಾಕಿ ಕೊಟ್ಟರೆ ತಾನೇ ಮಾಡೋದು. ಅವರು ಕೊಟ್ಟರೆ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಜಿಎಸ್ಟಿ ವಿಚಾರವಾಗಿ ದೆಹಲಿ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಇದರ ಬಗ್ಗೆ ಏನು ಯೋಚಿಸುತ್ತಾರೋ ನೋಡೋಣ ಎಂದರು.
ಸಚಿವರ ಸಹಿ ಮಾರಾಟ, ರೇಟ್ ಫಿಕ್ಸ್ ಕುರಿತು ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ದಾಖಲೆ, ಮಾಹಿತಿ ಇದ್ದರೆ ಹೇಳಲಿ. ಗಾಳಿಯಲ್ಲಿ ಗುಂಡು ಹೊಡೆದ್ರೆ ಹೇಗೆ? ಅವರ ಹೇಳಿಕೆಯಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ದೂರು ನೀಡಿದ್ದರು. ಪ್ರಧಾನಿಗೂ ಪತ್ರ ಬರೆದಿದ್ದರು. ಅವರೇ ಗಂಭೀರವಾಗಿ ಆರೋಪ ಮಾಡಿದ್ದರು. ಆ ರೀತಿ ಹೇಳಿದರೆ ಗಮನಹರಿಸಬಹುದು ಎಂದು ಸಚಿವ ಡಾ.ಪರಮೇಶ್ವರ ಕೇಂದ್ರ ಸಚಿವ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.