ಕೆಪಿಟಿಸಿಎಲ್ ದ್ವಾರಕ್ಕೆ ಬೀಗಮುದ್ರೆ

SIRIGERE PROTEST
Published on

ಸಿರಿಗೆರೆ: ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಸಿರಿಗೆರೆ ಸಮೀಪದ ಕೆಪಿಟಿಸಿಎಲ್ ವಿತರಣಾ ಕೇಂದ್ರದ ದ್ವಾರಬಾಗಿಲಿಗೆ ರೈತರು ಗುರುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಗಣಿಗಾರಿಕೆ, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ನೀಡಲಾಗುತ್ತಿದೆ ಆದರೆ ದೇಶಕ್ಕೆ ಅನ್ನ ಕೊಡುವ ರೈತ ರನ್ನು ಕತ್ತಲಿಗೆ ದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 10-ಸಂಜೆ 6 ರವರೆಗೆ ಬಾಗಿಲು ಹಾಕಿ, ಅಧಿಕಾರಿಗಳ ಪ್ರವೇಶ ನಿರ್ಬಂಧಿಸಿದ್ದರಿಂದ ಸುತ್ತಮು ತ್ತ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಇರಲಿಲ್ಲ. ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್ ಎಇಇ.ಪ್ರಸನ್ನಕುಮಾರ್, ಶಾಖಾಧಿಕಾರಿ ವನ್ನಾಜಿ ಅವರ ಮನವೊಲಿಕೆಗೆ ರೈತರು ಸ್ಪಂದಿಸಲಿಲ್ಲ. ಬೆಸ್ಕಾಂ ಇಂಜಿನಿಯರ್ ಜಯಣ್ಣ ಆಗಮಿಸುವಂತೆ ಪಟ್ಟು ಹಿಡಿದರು.

ಪರಿಸ್ಥಿತಿಯ ತೀವ್ರತೆ ಅರಿತ ಅಧಿಕಾರಿಗಳು, ಗಣಿಗಾರಿಕೆಗೆ ವಿದ್ಯುತ್ ಪೂರೈಕೆ ನಿಲ್ಲಿಸಿದರು. ಹೊಸ ವೇಳಾಪಟ್ಟಿಯಿಂದ ಹಗಲು 3, ರಾತ್ರಿ 2 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಸಿರಿಗೆರೆ ಮಠದಲ್ಲಿ ನಾಳೆ ಸಭೆ: ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಲು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ಅ.14ರ ಶನಿವಾರ ಕೆಪಿಟಿಸಿಎಲ್, ಬೆಸ್ಕಾಂ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ ಎಂದು ರೈತಮುಖಂಡರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net