

ಬೆಂಗಳೂರು : ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಬಂಧಿತ ಯುವರಾಜ, 51.25 ಲಕ್ಷ ರೂ. ಪಡೆದು ವಂಚನೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಂಚನೆ ಪ್ರಕರಣದಲ್ಲಿ ಕೋರ್ಟ್ ವಾರಂಟ್ ಪಡೆದು ಸಿಸಿಬಿ, ನಾಗರಬಾವಿಯ ಯುವರಾಜನ ಮನೆ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ 26 ಲಕ್ಷ ರೂ. ಮತ್ತು 91 ಕೋಟಿ ರೂ. ಮೌಲ್ಯದ ಚೆಕ್‌ಗಳು ಪತ್ತೆ ಆಗಿದ್ದವು. ಈ ಮೇರೆಗೆ ಯುವರಾಜನನ್ನು ಬಂಧಿಸಿದ ಸಿಸಿಬಿ ಪೊಲೀಸರು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಕೊಡುವಂತೆ ಮನವಿ ಸಲ್ಲಿಸಿದ್ದರು. ತನಿಖಾಧಿಕಾರಿಗಳ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಡಿ.22ರ ವರೆಗೆ ಯುವರಾಜನನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿವೆ. ಎಚ್‌ಎಸ್‌ಆರ್ ಲೇಔಟ್ 1ನೇ ಹಂತದ ಕೆ.ಪಿ. ಸುದೀಂಧ್ರ ರೆಡ್ಡಿ ಎಂಬುವರಿಗೆ ಯುವರಾಜ ಮತ್ತು ಮಧುರಾಜ್ ಸೇರಿಕೊಂಡು 51.25 ಲಕ್ಷ ರೂ. ವಂಚನೆ ಮಾಡಿದ್ದಾರೆ.
ಪ್ರಮುಖ ರಾಜಕೀಯ ವ್ಯಕ್ತಿಗಳು ನಮಗೆ ಪರಿಚಯ. ನಿಮಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುತ್ತೆವೆ ಎಂದು ನಂಬಿಸಿ 1.5 ಕೋಟಿ ರೂ. ಬೇಡಿಕೆ ಒಡ್ಡಿದ್ದಾರೆ. ಅದಕ್ಕೆ ಒಪ್ಪಿದ ಸುದೀಂಧ್ರ ರೆಡ್ಡಿ ಅವರಿಂದ ಹಂತ ಹಂಥವಾಗಿ ಚೆಕ್ ಮೂಲಕ 51.25 ಲಕ್ಷ ರೂ. ಪಡೆದುಕೊಂಡಿದ್ದಾರೆ. ಹೇಳಿದಂತೆ ಕೆಲಸ ಮಾಡಿಕೊಡದೆ ಇದ್ದಾಗ ವಾಪಸ್ ಹಣ ಕೊಡುವಂತೆ ದೂರುದಾರರು ಒತ್ತಾಯ ಮಾಡಿದ್ದಾರೆ. ಅದಕ್ಕೆ ಯುವರಾಜ್, ಜೀವ ಬೆದರಿಕೆ ಹಾಕಿದ್ದಾರೆ. ನೊಂದ ಸುದೀಂಧ್ರ ರೆಡ್ಡಿ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸ್ವಾಮೀಜಿ ವೇಷ ?
2008ರಲ್ಲಿ ಚಿತ್ರದುರ್ಗದಲ್ಲಿ ಮಠ ಸ್ಥಾಪಿಸಿಕೊಂಡು ಯುವರಾಜ, ಸ್ವಾಮೀಜಿ ವೇಷ ಧರಿಸಿಕೊಂಡು ಮೋಸ ಮಾಡುತ್ತಿದ್ದ. ನಿಜ ಬಣ್ಣ ಗೊತ್ತಾದ ಮೇಲೆ ಚಿತ್ರದುರ್ಗ ಬಿಟ್ಟು ಬೆಂಗಳೂರಿಗೆ ಬಂದು ಸರ್ಕಾರಿ ನೌಕರಿ, ಟೆಂಡರ್, ವರ್ಗಾವಣೆ ಮತ್ತು ರಾಜ್ಯ ಸಭಾ, ವಿಧಾನ ಪರಿಷತ್‌ಗೆ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ಕೆಲವರಿಗೆ ಭರವಸೆ ಕೊಟ್ಟಂತೆ ಕೆಲಸಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ.