

ಮಾಗಡಿ : ಒಂದು ವರ್ಷದೊಳಗೆ ಕೆಂಪೇಗೌಡರ ಸಮಾಧಿ ಸ್ಥಳವಿರುವ ಕೆಂಪಾಪುರವನ್ನು ವಿಶ್ವ ಪಾರಂಪರಿಕ ಕೇಂದ್ರವನ್ನಾಗಿಸಿ ಮುಂದಿನ ವರ್ಷ ಇಲ್ಲಿಯೇ ಕೆಂಪೇಗೌಡರ ಜಯಂತಿ ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಭರವಸೆ ನೀಡಿದರು.
ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಗೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡಿಗರ ಪಾಲಿಗೆ ಕೆಂಪಾಪುರ ಶ್ರದಾ ್ಧಕೇಂದ್ರ. ಇನ್ನೊಂದು ವರ್ಷದಲ್ಲಿ ಗ್ರಾಮವನ್ನು ವಿಶ್ವಮಟ್ಟದಲ್ಲಿ ಮಾದರಿಯನ್ನಾಗಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿ ಕೆಂಪೇಗೌಡರ ಕಾಲದ ವೈಭವವನ್ನು ಮರುಸೃಷ್ಟಿ ಮಾಡಲಾಗುವುದು ಎಂದರು.
ಗ್ರಾಮದ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದ್ದು, ಗ್ರಾಮಸ್ಥರ ಸಹಕಾರದಿಂದ ಭೂಸ್ವಾದೀನಪಡಿಸಿಕೊಳ್ಳಲಾಗುತ್ತಿದೆ. ಸಮರ್ಪಕ ಪರಿಹಾರ, ಕಟ್ಟಡ ಪರಿಹಾರ ನೀಡಲಾಗುವುದು. ಗ್ರಾಮದ ಜನರ ಬದುಕು ರೂಪಿಸುವಂತಹ ಕೆಲಸ ಮಾಡಲಾಗುವುದು. ಸರ್ಕಾರ ಕೆಂಪೇಗೌಡರ ಜಯಂತಿ ಎಂದು ಅಧಿಕೃತವಾಗಿ ಮೀಸಲಾಗಿಟ್ಟು ಘೋಷಣೆ ಮಾಡಿ ಶ್ರದ್ಧೆ, ಭಕ್ತಿ, ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಕೆಂಪೇಗೌಡ ಸಂಶೋಧನಾ ಕೇಂದ್ರ ಕಾಮಗಾರಿಗೆ ಭೂಮಿಪೂಜೆಗೆ ಚಾಲನೆ ನೀಡಲಾಗಿದ್ದು, ತ್ವರಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ದೇಶದಲ್ಲಿ ಎಲ್ಲೂ ಕಂಡರಿಯದ ರೀತಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ಕೆಂಪೇಗೌಡರ 108 ಅಡಿ ಎತ್ತರದ ಲೋಹದ ಪ್ರತಿಮೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪ್ರತಿಮೆ ಲೋಕಾರ್ಪಣೆಯಾಗಲಿದೆ, ನೋಯಿಡಾದಲ್ಲಿ ಪ್ರತಿಮೆ ಸಿದ್ಧವಾಗುತ್ತಿದ್ದು, ಇದರ ಜತೆಗೆ ಸೆಂಟ್ರಲ್ ಪಾರ್ಕ್ ನಿರ್ಮಿಸಿ ಅವರ ಪ್ರತಿಯೊಂದು ಸಾಧನೆಗಳನ್ನು ಅಳವಡಿಸಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೋಟೆ, ಕೊತ್ತಲು, ಕೆರೆ, ದೇವಾಲಯಗಳನ್ನು ಅಭಿವೃದ್ದಿಗೊಳಿಸಲಾಗುವುದು. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಕೆಂಪೇಗೌಡರು ಕಾರಣರಾಗಿದ್ದಾರೆ. ಅದೇರೀತಿ ಕೆಂಪೇಗೌಡರ ಹೆಸರನ್ನು ವಿಶ್ವಖ್ಯಾತಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಧನಂಜಯ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಚಿಕ್ಕಕಲ್ಯಾ ಶ್ರೀಧರ್, ಎಪಿಎಂಸಿ ಮಾಜಿ ನಿರ್ದೆಶಕ ಜಯಕುಮಾರ್, ಚಿಕ್ಕಮುದಿಗೆರೆ ಗ್ರಾಪಂ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಸಿಇಒ ಇಕ್ರಂ, ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಇತರರು ಇದ್ದರು.
ಕೆರೆ-ಕಟ್ಟೆ, ಕೋಟೆಗಳ ಅಭಿವೃದ್ಧಿ : ಸರ್ಕಾರ ಹಾಗೂ ಡಿಸಿಎಂ ಕೆಂಪೇಗೌಡರ ಸಮಾಧಿ, ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದಕ್ಕೆ ನಾನು ಕೈಜೋಡಿಸಿದ್ದು ಗ್ರಾಮಸ್ಥರ ಸಹಕಾರ ಪಡೆದು ಭೂಸ್ವಾಧೀನಪಡಿಸಿಕೊಂಡು ಸಮರ್ಪಕ ಪರಿಹಾರ ನೀಡಿ ಮೂಲ ಸೌಲಭ್ಯ ನೀಡಲಾಗುವುದು. ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಪೇಗೌಡರು ನಿರ್ಮಿಸಿದ ಮಾಗಡಿ ಕೋಟೆ, ಕುದೂರು ಬೈರವನದುರ್ಗ ಬೆಟ್ಟ, ಕೆರೆ, ಕಲ್ಯಾಣಿ, ಕಟ್ಟೆ, ದೇವಾಲಯ, ಸಾವನದುರ್ಗ ಬೆಟ್ಟ ಸೇರಿದಂತೆ ಪ್ರತಿಯೊಂದು ಸ್ಥಳಗಳನ್ನು ಹಂತ, ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ಸಿಪಿವೈ ಅವರನ್ನೇ ಕೇಳಿ : ಪರೀಕ್ಷೆ ಬರೆದಿದ್ದೇನೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆಂಬ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನಿಸಿದಾಗ, ಯೋಗೇಶ್ವರ್ ಅವರನ್ನೇ ಕೇಳಿ ಎಂದು ಡಿಸಿಎಂ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.