ಕೆ.ಹನುಮಂತು ಕೊಲೆ ಪ್ರಕರಣದ ಹಿಂದೆ ಪ್ರಭಾವಿಗಳು

Crime Logo
Published on

ಬೆಳವಾಡಿಯಲ್ಲಿ ಇತ್ತೀಚೆಗೆ ನಡೆದ ಕೆ.ಹನುಮಂತು ಬರ್ಬರ ಕೊಲೆ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡವಿದೆ. ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಾ.ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ದೂರಿದರು.

ಈ ಕೊಲೆ ಪ್ರಕರಣದ ಹಿಂದೆ ಮೈಸೂರು ನಗರದ ಶಾಸಕರೊಬ್ಬರ ಆಪ್ತರೊಬ್ಬರ ಹೆಸರು ಕೇಳಿಬಂದಿದ್ದರೂ ಆ ಶಾಸಕರು ತುಟಿ ಬಿಚ್ಚಿಲ್ಲ. ಶಾಸಕರು ಈ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹನುಮಂತು ಭೋವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾನೂನು ಹೋರಾಟ ಮಾಡಿ ತಮ್ಮ ತಾತನಿಂದ ಬಂದಿದ್ದ ಜಮೀನು ವಾಪಸ್ ಪಡೆದಿದ್ದಾರೆ. ಹೀಗಾಗಿ ಭೂ ಮಾಫಿಯಾದವರ ಕೈವಾಡ ಈ ಕೊಲೆ ಹಿಂದಿರುವ ಶಂಕೆಯಿದೆ. ಆದ್ದರಿಂದ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದಕ್ಕೆ ಒಂದು ವಾರ ಗಡುವು ನೀಡುತ್ತಿದ್ದು, ತಪ್ಪಿದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ತಾಲೂಕಿನ ಬೆಲವತ್ತ, ಬೆಳವಾಡಿ, ಕೆಸರೆ ಮೊದಲಾದ ಗ್ರಾಮಗಳಲ್ಲಿ ದಲಿತರಿಗೆ ನೀಡಿದ್ದ ಜಮೀನನ್ನು ಇತರರು ಕಬಳಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ ಇವುಗಳಿಗೆ ಪರಿಹಾರ ಪಡೆದಿದ್ದಾರೆ. ಹಲವರು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಹೀಗಾಗಿ ಸಂಬಂಧಿಸಿದವರು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಗೋವಿಂದರಾಜು, ರಾಜಣ್ಣ, ಸುರೇಶ್ ಯರಗನಹಳ್ಳಿ, ಕೃಷ್ಣ ಕೊಳಗಟ್ಟ, ಪುಟ್ಟಸ್ವಾಮಿ ದೇವರಸನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net