ಕೃಷ್ಣೆ ರೈತರಿಗೆ ಸಿಗದ ಮಾಯಾಜಿಂಕೆ !

0701 Surapur 01(01)
Published on

ಖಾಜಾಹುಸೇನ್ ಕೋನಹಳ್ಳಿ ವಡಗೇರಾ
ಕೃಷ್ಣಾ ಮೇಲ್ದಂಡೆ ಕಾಲುವೆ ಕೊನೇ ಭಾಗದ ರೈತರ ಜಮೀನುಗಳಿಗೆ ಪ್ರತಿವರ್ಷ ಸಮರ್ಪಕ ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದು, ವಡಗೇರಾ ತಾಲೂಕು ಕೇವಲ ಕಾಗದದಲ್ಲಿ ನೀರಾವರಿ ಪ್ರದೇಶ ಎನ್ನುವಂತಿದೆ.

ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್ಎಲ್) ಕಾಲುವೆ ಕೊನೆಯ ಭಾಗದಲ್ಲಿ ತಾಲೂಕಿನ ಕೆಲ ಗ್ರಾಮಗಳಿವೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಹರಿಸಿದರೂ ರೈತರು ಮಾತ್ರ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾಲುವೆಗಳ ನಿರ್ವಹಣೆ ಇಲ್ಲದಿರುವುದೇ ಮೂಲ ಕಾರಣ. ವರ್ಷವಿಡೀ ಹೂಳು ತೆಗೆಯದ ಕಾರಣ ಕೆನಾಲ್ನಲ್ಲಿ ಜಾಲಿಕಂಟಿ ಬೆಳೆದಿದ್ದರಿಂದ ನೀರು ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ. ರೈತರು ಮಳೆಯಾಶ್ರಿತ ಒಕ್ಕಲುತನ ಮಾಡುವುದು ನಿಂತಿಲ್ಲ.

ಕೊನೇ ಭಾಗದ ಕಾಲುವೆಗಳಿಗೆ ನೀರು ಸಿಗದಿರುವ ಸಮಸ್ಯೆ ಹೊಸತೇನಲ್ಲ. ಬಸವಸಾಗರ ಜಲಾಶಯ ನಿರ್ಮಾಣ ಆದಾಗಿನಿಂದಲೂ ಇದೇ ಸ್ಥಿತಿ ಇದೆ. ಅವೈಜ್ಞಾನಿಕ ನಿಮರ್ಾಣ ಮತ್ತು ಅದರ ನಿರ್ವಹಣೆಗೆ ಅಧಿಕಾರಿಗಳು ಎಳ್ಳುನೀರು ಬಿಟ್ಟ ಪರಿಣಾಮ ರೈತರ ಕಣ್ಣಲ್ಲಿ ನೀರು ಹರಿಯುವುದು ಮುಂದುವರಿದಿದೆ. ಈ ಭಾಗದಲ್ಲಿ ರೈತರು ಕೃಷಿ ಮಾಡಬೇಕಾದರೆ ಕೊಳವೆಬಾವಿ ಇಲ್ಲವೆ ಮಳೆ ಅವಲಂಬಿಸುವುದು ಸದ್ಯದ ಅನಿವಾರ್ಯ.

ಕಾಲುವೆ ಮೇಲ್ಭಾಗದ ರೈತರು ಗದ್ದೆಯಲ್ಲಿ ಭತ್ತ ನಾಟಿ ಮಾಡಬೇಕಾದರೆ ಪ್ರತಿವರ್ಷ ಐಸಿಸಿ ಮೀಟಿಂಗ್ ದಾರಿ ಕಾಯುತ್ತಾರೆ. ಕಾರಣ ಅಲ್ಲಿ ನೀರು ಬಿಡುವ ಕೊನೇ ದಿನಾಂಕ ನಿಗದಿಯಾಗುವುದರಿಂದ. ಆದರೆ ಕೆಳಭಾಗದ ರೈತರು ಕಾಲುವೆಗೆ ನೀರು ಹರಿಸಿದರೂ, ಬಿಟ್ಟರೂ ನಮಗೇನು ಲಾಭ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಲುವೆ ತುಂಬೆಲ್ಲ ಹೂಳು ತುಂಬಿದರೂ ಕೆಬಿಜೆಎನ್ಎಲ್ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕಾಲುವೆ ನಿರ್ವಹಣೆಗೆ ಪ್ರತಿವರ್ಷ ಲಕ್ಷಗಟ್ಟಲೆ ಅನುದಾನ ಸಕರ್ಾರದಿಂದ ಬಿಡುಗಡೆಯಾದರೂ ಅಸಲಿ ಹಾಲತ್ ಏನಿದೆ ಎಂದು ಸಂಬಂಧಿಸಿದ ಶಾಸಕರು ಗಮನಿಸುತ್ತಿಲ್ಲ ಎಂಬುದು ರೈತರ ಆರೋಪ.

ವಿತರಣಾ ಕಾಲುವೆ 21ರಿಂದ ಉಪ ಕಾಲುವೆಗಳಿಗೆ ನೀರು ಬರುತ್ತದೆ. ಸದ್ಯ ಕಾಡಂಗೇರಾ, ಕ್ಯಾತನಾಳ, ಹೊರಟೂರ, ಉಳ್ಳೆಸುಗೂರ, ವಡಗೇರಾ, ಕೋನಹಳ್ಳಿ, ಕುರಕುಂದಾ ಹೀಗೆ ಹಲವು ಗ್ರಾಮಗಳ ರೈತರು ಶೇಂಗಾ ಬಿತ್ತಿದ್ದಾರೆ. ಆದರೆ ಹೂಳು ತುಂಬಿದ್ದರಿಂದ ನೀರು ಸಿಗುತ್ತಿಲ್ಲ. ಇದರಿಂದ ಈ ಭಾಗದ ರೈತರಿಗೆ ಕೃಷ್ಣೆ ಯಾವತ್ತಿಗೂ ಸಿಗದ ಮಾಯಾಜಿಂಕೆ ಆಗಿದ್ದಾಳೆ. ಇನ್ನಾದರೂ ಆಡಳಿತ ಮತ್ತು ಜನಪ್ರತಿನಿಧಿಗಳು ಕಾಲುವೆ ಸಮಸ್ಯೆ ಬಗ್ಗೆ ನಜರ್ ಹರಿಸುವುದು ಜರೂರಿಯಾಗಿದೆ.

ಆತ್ಮಾವಲೋಕನ ಮಾಡಿಕೊಳ್ಳಲಿ ಶಾಸಕರು
ಮೇಲ್ಭಾಗದ ರೈತರು ಪುಣ್ಯವಂತರು. ವರ್ಷವಿಡೀ ಅವರಿಗೆ ನೀರು ಸಿಗುತ್ತದೆ. ಕೊಂಚ ತೊಂದರೆಯಾದರೂ ಹಾಲಿ ಹಾಗೂ ಮಾಜಿ ಎಮ್ಮೆಲ್ಲೆಗಳು ಸಕರ್ಾರದೊಂದಿಗೆ ಗುದ್ದಾಡಿ ರೈತರ ಅನುವು-ಆಪತ್ತಿಗೆ ಸ್ಪಂದಿಸುತ್ತಾರೆ. ಆದರೆ ನೀರಾವರಿ ಸಲಹಾ ಸಮಿತಿ ವಿಶೇಷ ಆಹ್ವಾನಿತ ಶಾಸಕ ವೆಂಕಟರಡ್ಡಿ ಮುದ್ನಾಳ್ ಅವರು ಸಭೆಯಲ್ಲಿ ವಡಗೇರಾ ರೈತರ ಸಮಸ್ಯೆ ಬಗ್ಗೆ ಒಮ್ಮೆಯಾದರೂ ಕೇಳಿದ್ದಾರೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಒಳಿತು ಎನ್ನುತ್ತಾರೆ ರೈತರು. ಒಟ್ಟಾರೆ, ವಡಗೇರಾ ತಾಲೂಕಿನ ಕೊನೇ ಭಾಗದ ಸಮಸ್ಯೆ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕಾಯಂ ಅಸ್ತ್ರವಾದರೆ, ಕೆಲ ಅಧಿಕಾರಿಗಳಿಗೆ ವರ್ಷವಿಡೀ ಹಾಲು ಕೊಡುವೆ ಕಾಮಧೇನು. ರೈತರ ಪಾಲಿಗೆ ಮಾತ್ರ ಸದಾ ಒದ್ದುಕೊಳ್ಳುತ್ತಲೇ ಇರುವ ಆಕಳಾಗಿರುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net