

ಮಾಂಜರಿ: ಕೃಷ್ಣಾ ನದಿಯಲ್ಲಿ ಹೊಸ ನೀರಿನ ಜತೆಗೆ ವಿಷಕಾರಿ ಬಳ್ಳಿ ( ಹೈಸಿಂಥ್ ವೀಡ್) ಹರಿದು ಬರುತ್ತಿರುವುದರಿಂದ ನದಿ ನೀರು ಮಲಿನವಾಗುತ್ತಿದ್ದು, ದಂಡೆಯ ಜನರಲ್ಲಿ ಆತಂಕ ಉಂಟು ಮಾಡಿದೆ. ಅಲ್ಲದೆ, ನದಿಯಲ್ಲೂ ಈ ವಿಷಕಾರಿ ಬಳ್ಳಿ ಬೆಳೆಯುತ್ತಿದ್ದು, ಅದನ್ನು ತೆರೆವುಗೊಳಿಸಲು ಮುಂದಾಗದ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷೃಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿವರ್ಷ ಮಳೆಗಾಲ ಪ್ರಾರಂಭವಾಗುವ ಸ್ವಲ್ಪ ದಿನ ಮೊದಲು ನದಿಗೆ ಮಹಾರಾಷ್ಟ್ರದಿಂದ ಹರಿದು ಬರುವ ಹೊಸ ನೀರಿನ ಜತೆಗೆ ಈ ವಿಷಕಾರಿ ಬಳ್ಳಿ ಹರಿದು ಬರುತ್ತವೆ. ಅಲ್ಲಲ್ಲಿ ಇರುವ ಚಿಕ್ಕ ಡ್ಯಾಂ ಮತ್ತು ಸೇತುವೆಯ ಗೋಡಗೆ ಇವು ತಾಗಿ ಅಲ್ಲೇ ನಿಂತು ಬೆಳೆಯುತ್ತ ಇಡೀ ನದಿಯನ್ನೇ ಆಕ್ರಮಿಸುತ್ತವೆ. ಇದು ರೈತರಿಗೂ ತೊಂದರೆ ಆಗುತ್ತಿದೆ.
ನೀರು ಬಳಸಲೂ ಭಯ: ನೆರೆಯ ಮಹಾರಾಷ್ಟ್ರದ ಪಂಚಗಂಗಾ ನದಿಯ ನೀರು ಸುಕ್ಷೇತ್ರ ನೃಸಿಂಹವಾಡಿ ಮುಖಾಂತರ ಕೃಷ್ಣಾ ನದಿಗೆ ಹರಿದು, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಮಧ್ಯದ ಸೇತುವೆ ಬಳಿಯ ಕೃಷ್ಣಾ ನದಿಗೆ ಸೇರುತ್ತವೆ. ಕಳೆದ 15 ದಿನಗಳಿಂದ ಹರಿದು ಬರುತ್ತಿರುವ ನೀರಿನೊಂದಿಗೆ ಈ ವಿಷಕಾರಿ ಬಳ್ಳಿಯೂ ತೇಲಿ ಬರುತ್ತಿದ್ದು, ಅದೀಗ ಅಲ್ಲಿಯೇ ಬೆಳೆಯುತ್ತಿದ್ದು ನದಿಯ ಅರ್ಧ ಭಾಗವನ್ನೇ ಆವರಿಸಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯುವ ನೀರು ಬಳಕೆಗೂ ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮಸ್ಥರ ಅಸಮಾಧಾನ: ಬಳ್ಳಿ ತೆಗೆದು ನದಿ ಸ್ವಚ್ಛಗೊಳಿಸುವಂತೆ ತಾಲೂಕು, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೃಷ್ಣಾ ನದಿಯ ಸುತ್ತಮುತ್ತಲಿನ ನೂರಾರು ಗ್ರಾಮಗಳ ಜನರು ಕುಡಿಯುವ ನೀರು, ಕೃಷಿ ಚುಟವಟಿಕೆಗಳಿಗಾಗಿ ಈ ನದಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ, ಇದೀಗ ನದಿ ತುಂಬೆಲ್ಲ ವಿಷಕಾರಿ ಬಳ್ಳಿ ಬೆಳದಿದ್ದರಿಂದ ನೀರಿನ ಬಳಕೆಗೆ ಅಡ್ಡಿಯಾಗಿದೆ. ಅಲ್ಲದೆ, ಬಳ್ಳಿಯಿಂದಾಗಿ ನೀರು ವಿಷವಾಗುತ್ತಿದ್ದು ಜನ-ಜಾನುವಾರಗಳಿಗೆ ಕುಡಿಯಲು, ಬಳಸಲೂ ಭಯಗೊಳ್ಳುವಂತಾಗಿದೆ. ಅಲ್ಲದೆ, ಜನರು ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಜಿಲ್ಲಾಡಳಿತ ಕೂಡಲೇ ವಿಷಯುಕ್ತ ಬಳ್ಳಿ ತೆರೆವುಗೊಳಿಸಿ ನದಿ ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ವಿಷಬಳ್ಳಿ ಬೆಳೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನದಿಯಲ್ಲಿನ ಬಳ್ಳಿ ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ