

ಕೃಷ್ಣ ತಿಪ್ಪೂರು ಅವರು ಬರೆದಿರುವ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನೆರವೇರಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರಕೂಟ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಗಣೇಶ್ವರಾನಂದ ಸ್ವಾಮೀಜಿ, ಕೃಷ್ಣ ತಿಪ್ಪೂರು ಅವರ ‘ಕಾವೇರಿ ತಡಿಯಿಂದ ಗಂಗೋತ್ರಿ ಉಡಿಗೆ’, ‘ನಾ ನೆಲದ ಬನಿಯಾಗಬೇಕು’, ‘ಕನ್ನಡದ ತೇರು’ ಕೃತಿಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದಾಸ್ ಮಾತನಾಡಿ, ಕೃಷ್ಣ ತಿಪ್ಪೂರು ಅವರು ಬರೆದಿರುವ ಕೃತಿಗಳು, ಅವರ ಭಾಷೆ ಬಳಕೆ ಎಂತವರನ್ನೂ ಓದಲು ಆಹ್ವಾನಿಸುತ್ತವೆ. ಹಾಗಾಗಿ ಅವರನ್ನು ಅವರು ಬರೆದಿರುವ ಸಾಹಿತ್ಯದ ಮೂಲಕ ಪರಿಚಯಿಸಿಕೊಳ್ಳಬೇಕಿದೆ. ಭೀಷ್ಮ ಎಂಬ ಕಾದಂಬರಿ, ರಾಮಾಯಣ ಕೃತಿ ಹಾಗೂ ಪ್ರವಾಸಿ ಕಥನಗಳು ಓದುಗರ ಮೇಲೆ ಪ್ರಭಾವ ಬೀರುತ್ತವೆ. ಇವರ ಕೃತಿ ಓದುವುದೇ ಕನ್ನಡಿಗರಿಗೆ ನಿತ್ಯೋತ್ಸವ. ಅವುಗಳಿಂದ ನನಗೂ ಸ್ಪೂರ್ತಿ ದೊರೆತಿದೆ ಎಂದರು.
ಇತ್ತೀಚೆಗೆ ಕನ್ನಡ ಸಾಹಿತ್ಯಕ್ಕೆ ಒಲವು ತೋರಿಸುವವರಿಲ್ಲ. ಬಲವಂತವಾಗಿ ಓದಿ ಎನ್ನಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿಯೇ ನನ್ನ ಕವಿತೆಗಳನ್ನ ನಾನು ಪುಸ್ತಕ ತರುವ ಸಾಹಸ ಮಾಡಲಿಲ್ಲ ಎಂದರು.
ಮ.ನಂಜುಂಡಯ್ಯ, ಡಾ.ವೈ.ಡಿ.ರಾಜಣ್ಣ ಕೃತಿ ಕುರಿತು ಮಾತನಾಡಿದರು. ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಸಾಪ ಗೌರವ ಕಾರ್ಯದರ್ಶಿ ಲತಾಮೋಹನ್, ಮಿತ್ರಕೂಟ ಕಾರ್ಯದರ್ಶಿ ಟಿ.ಜೆ. ದೊರೆಸ್ವಾಮಿ ಇದ್ದರು.