

ಸಾಲಿಗ್ರಾಮ: ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕಾದರೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗುವ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸನ್ನ ಸಲಹೆ ನೀಡಿದರು.
ತೆಂಗಿನಲ್ಲಿ ರುಗೋಸಾ ಬಿಳಿನೊಣದ ಸಮಗ್ರ ನಿರ್ವಹಣೆ ಕುರಿತು ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ರೈತರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ತೋಟಗಾರಿಕೆ ಬೆಳೆಯನ್ನು ಬೆಳೆಯಲು ಮತ್ತು ಪುನಶ್ಚೇತನ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನದ ಉದ್ಯೋಗದ ಜತಗೆ ಸಹಾಯಧನವನ್ನೂ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸೌಲಭ್ಯಗಳನ್ನು ಪಡೆಯಲು ಜಾಬ್‌ಕಾರ್ಡ್, ಆರ್‌ಟಿಸಿ, ಆಧಾರ್ ಕಾರ್ಡ್, ಬಿಪಿಎಲ್, ಬ್ಯಾಂಕ್ ಪುಸ್ತಕವನ್ನು ಗ್ರಾಪಂಗೆ ನೀಡಬೇಕು. ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಉದ್ಯೋಗ ಮಾಡುವ ರೈತರಿಗೆ ಪ್ರತಿ ದಿನಕ್ಕೆ 316 ರೂ. ಕೂಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರೈತರು ತೆಂಗು ಬೆಳೆ ಬೆಳೆಯುವಾಗ ಅಂತರ ಬೆಳೆಗಳಾದ ನಿಂಬೆ, ಜಾಯಿಕಾಯಿ, ಪಪ್ಪಾಯಿ, ಮೆಣಸು ಬೆಳೆಯಬೇಕು. ಇದು ಇನ್ನಷ್ಟು ಲಾಭ ಪಡೆಯಲು ಸಹಕಾರಿ ಎಂದರು.
ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಸಿ.ಗೋವಿಂದರಾಜು ಮಾತನಾಡಿದರು. ನಾಗನಹಳ್ಳಿ ವಿಸ್ತಾರಣಾ ಶಿಕ್ಷಣಾ ಘಟಕದ ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ, ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್, ಕ್ಷೇತ್ರ ಸಹಾಯಕ ಆಸಿಫ್ ಪಾಷ, ರೈತ ಸಂಘದ ಮುಖಂಡ ರಾಮಪ್ರಸಾದ್, ಚುಂಚನಕಟ್ಟೆ ಜಲಪಾತೋತ್ಸವ ರೈತ ಉತ್ಪಾದನಾ ಕಂಪನಿ ಅಧ್ಯಕ್ಷ ಬಸವರಾಜು, ಸಿಇಒ ದಿನೇಶ್, ಹೊಸೂರು ಕೃಷಿ ಪತ್ತಿನ ಸಂಘದ ಮಾಜಿ ಉಪಾಧ್ಯಕ್ಷ ರಮೇಶ್, ನಿರ್ದೇಶಕ ವಿವೇಕ್, ರೈತರಾದ ಯದುಕುಲ, ಸತ್ಯಪ್ಪ, ಭರತ್, ಮಧು, ಸುನೀಲ್, ಪುರುಷೋತ್ತಮ್ ಇದ್ದರು.