

ತಿ.ನರಸೀಪುರ: ರೈತರು ಕೃಷಿಯಲ್ಲಿ ಹೊಸ ಹೊಸ ಯಂತ್ರಗಳ ಆವಿಷ್ಕಾರವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಬೆಳವಣಿಗೆ ಹೊಂದಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ಯಂತ್ರಗಳನ್ನು ಉಪಯೋಗಿಸಿ ತಮ್ಮ ಬೇಸಾಯ ವೃದ್ಧಿಸಿಕೊಳ್ಳಬೇಕೆಂದು ಶಾಸಕ ಎಂ.ಅಶ್ವಿನ್‌ಕುಮಾರ್ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಪವರ್ ಟಿಲ್ಲರ್, ಪವರ್ ವೀಡರ್ ಹಾಗೂ ಚಾಪ್ ಕಟರ್ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಮಹತ್ವದ ಯೋಜನೆಗಳನ್ನು ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ರೈತ ಸಮುದಾಯ ಸರ್ಕಾರದ ಎಲ್ಲ ರೀತಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ವೈಜ್ಞಾನಿಕ ಬೆಲೆ ನಿಗದಿಗೊಳಿಸುವುದರ ಜತೆಗೆ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿ ಮತ್ತು ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಅಲ್ಲದೆ ಕೃಷಿ ಅಭಿವೃದ್ಧಿಗೆ ಪೂರಕವಾದ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತದೆ. ರೈತರು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ ಮಾತನಾಡಿ, ಇಲಾಖೆಯು ರೈತರಿಗೆ ನೀಡುತ್ತಿರುವ ಪವರ್ ಟಿಲ್ಲರ್‌ನ ಪೂರ್ಣ ದರ 2,04,500 ರೂ.ಗಳಾಗಿದ್ದು, ಪ.ಜಾತಿ ಮತ್ತು ಪ.ವರ್ಗದ ಫಲಾನುಭವಿ ರೈತರು ಇಲಾಖೆಗೆ 1,04,500 ರೂ.ಗಳನ್ನು ಪಾವತಿಸಿದರೆ, 1 ಲಕ್ಷ ರೂ.ಗಳ ಸಹಾಯಧನ ದೊರೆಯಲಿದೆ. ಸಾಮಾನ್ಯ ವರ್ಗದ ರೈತರು 1,22,000 ರೂ.ಗಳನ್ನು ಪಾವತಿಸಿದರೆ ಅವರಿಗೆ 82,000 ರೂ.ಗಳ ಸಹಾಯ ಧನ ಹಾಗೂ ಪವರ್ ವೀಡರ್ ಯಂತ್ರಕ್ಕೆ 82,800 ರೂ.ಗಳ ಸಬ್ಸಿಡಿ ದೊರಕಲಿದೆ ಎಂದು ತಿಳಿಸಿದರು.