ಕೃಷಿ ವಿವಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ದೇಸಿ ಸಮ್ಮೇಳನ

Bengaluru Agricultural University
Published on

ಸೆ.4ನೇ ವಾರದಲ್ಲಿ ಜಿಕೆವಿಕೆ ಆವರಣದಲ್ಲಿ ಕಾರ್ಯಕ್ರಮ

ಬೆಂಗಳೂರು : ದೇಸಿ, ಸಮೇತಿ(ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ಮತ್ತು ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ (ಮ್ಯಾನೇಜ್), ಹೈದರಾಬಾದ್ ರವರ ಆಶ್ರಯದಲ್ಲಿ ೆ ಇದೇ ಪ್ರಥಮ ಬಾರಿಗೆ ಸೆ.2023ರ ನಾಲ್ಕನೇ ವಾರದಲ್ಲಿ ದೇಸಿ ಸಮ್ಮೇಳನ-2023ವನ್ನು ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಲಿದೆ.
ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು. ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ, ವಿಚಾರ ವಿನಿಮಯ, ಯಶೋಗಾಥೆಗಳು, ಚಿಂತನ ಮತ್ತು ಮಂಥನ ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು ಈ ಸಮ್ಮೇಳನದ ಉದ್ದೇಶವಾಗಿದೆ.ಈ ಸಮ್ಮೇಳನದಲ್ಲಿ 3ಸಾವಿರ ಕೃಷಿ ಪರಿಕರ ಉದ್ದಿಮೆದಾರರು ಭಾಗವಹಿಸಲಿದ್ದಾರೆ.

ದೇಶದಲ್ಲಿ ಕೃಷಿ-ಪರಿಕರ ಮಾರಾಟಗಾರರು ಕೃಷಿಪರಿಕರಗಳನ್ನು ರೈತರಿಗೆ ಮಾರಾಟ ಮಾಡುವ ಜೊತೆಗೆ ನಿರಂತರವಾಗಿ ಕೃಷಿ ತಾಂತ್ರಿಕ ಸಲಹಾ ಸೇವೆಯನ್ನು ನೀಡುವ ಮಹತ್ತರವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಬಹುತೇಕ ಕೃಷಿ ಪರಿಕರ ಮಾರಾಟಗಾರರು ಔಪಚಾರಿಕ ಕೃಷಿ ಶಿಕ್ಷಣವನ್ನು ಪಡೆದಿರುವುದಿಲ್ಲ. ಇವರಿಗೆ ಕೃಷಿಯ ಬಗ್ಗೆ ವೈಜ್ಞಾನಿಕ ಜ್ಞಾನ ನೀಡುವ ಉದ್ದೇಶದಿಂದ ದೇಶಾದ್ಯಂತ ಕೇಂದ್ರ ಸರ್ಕಾರದ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್)ರವರು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಹಯೋಗದೊಂದಿಗೆ ಒಂದು ವರ್ಷದ ಅವಧಿಯ ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್ (ದೇಸಿ) ಅನ್ನು 2003 ರಿಂದ ನೀಡುತ್ತಿದೆ.

ದೇಸಿ ಪ್ರಮಾಣ ಪತ್ರ ಪಡೆದವರು ಮಾತ್ರ ಕೃಷಿ ಪರಿಕರ ಮಾರಾಟ ಮಾಡಲು ಲೈಸೆನ್ಸ್ ಪಡೆಯಬಹುದು. ಕೃಷಿ ಪರಿಕರ ಮಾರಾಟಗಾರರು ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸುವ ಜೊತೆಗೆ ಅರೆ-ವಿಸ್ತರಣಾ ಕಾರ್ಯಕರ್ತರಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯದ ದಕ್ಷಿಣ ಭಾಗದ 16 ಜಿಲ್ಲೆಗಳಲ್ಲಿರುವ 38 ನೋಡಲ್ ಕೇಂದ್ರಗಳ ಮುಖಾಂತರ 6756 ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಿದೆ ಮತ್ತು ಪ್ರಸ್ತುತ 1880 ಶಿಕ್ಷಣಾರ್ಥಿಗಳು ದೇಸಿ ಕೋರ್ಸ್ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಕಲ್ಪನ (ನೋಡಲ್ ಅಧಿಕಾರಿಗಳು (ದೇಸಿ)) ಮೊ.ಸಂ.9448088958 ಮತ್ತು ಕು. ಮಂಜುಳ.ಜಿ, (ಯೋಜನಾ ಸಹಾಯಕರು) ಮೊ.ಸಂ.73493 52271 ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net