

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಸೆ. 17ರಿಂದ 20ರವರೆಗೆ ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಘೋಷ ವಾಕ್ಯದಡಿ ಕೃಷಿ ಮೇಳ-2022 ಆಯೋಜಿಸಲಾಗಿದೆ ಎಂದು ಕೃವಿವಿ ಕುಲಪತಿ ಡಾ. ಆರ್. ಬಸವರಾಜಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 17ರಂದು ಬೆಳಗ್ಗೆ 10.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲಪುಷ್ಪ, ಗಡ್ಡೆ-ಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ, ಬೆಳಗ್ಗೆ 11.30ಕ್ಕೆ ಬೀಜ ಮೇಳ ಉದ್ಘಾಟನೆ, ಸೂರ್ಯಕಾಂತಿ ಬೆಳೆ ವಿಚಾರಗೋಷ್ಠಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸೆ. 18ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳ ಉದ್ಘಾಟಿಸುವರು. ಕೃಷಿ ಸಚಿವ ಬಿ.ಸಿ. ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ, ಶಶಿಕಲಾ ಜೊಲ್ಲೆ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಇತರರು ಪಾಲ್ಗೊಳ್ಳುವರು. ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸೆ. 19ರಂದು ಬೆಳಗ್ಗೆ 10 ಗಂಟೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ವಿಚಾರಗೋಷ್ಠಿ, ಬೆಳಗ್ಗೆ 11.30ಕ್ಕೆ ನೈಸರ್ಗಿಕ ಕೃಷಿ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಸೆ. 20ರಂದು ಬೆಳಗ್ಗೆ 10.30ಕ್ಕೆ ಕನ್ನಡ ಕೃಷಿ ಗೋಷ್ಠಿ, 11.30ಕ್ಕೆ ದ್ವಿತೀಯ ಕೃಷಿ ವಿಚಾರಗೋಷ್ಠಿ ಹಾಗೂ ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದೆ ಎಂದರು.