ಕೃತಿಯಾಗಿ ರೂಪ ಪಡೆದ ಪ್ರವಚನಗಳು

15
Published on

ಕೋವಿಡ್19 ಲಾಕ್‌ಡೌನ್ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಜನರನ್ನು ಮಾನಸಿಕವಾಗಿ ಒಂದುಗೂಡಿಸುವ ಪ್ರಯತ್ನದ ಭಾಗವಾಗಿ ಆನ್‌ಲೈನ್‌ನಲ್ಲಿ ನಡೆಸಿದ ಪ್ರವಚನಗಳು ಕೃತಿಯಾಗಿ ರೂಪ ಪಡೆದಿದ್ದು, ಡಿ.18 ರಂದು ಬಿಡುಗಡೆಯಾಗಲಿದೆ. ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಕೃತಿ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರನ್ನು ಅಭಿನಂದಿಸಲಾಗುತ್ತದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿನಂದನಾ ನುಡಿಯಾಡಲಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ‘ವಿಜಯವಾಣಿ’ ಗೆ ತಿಳಿಸಿದರು.

600 ಪುಟಗಳನ್ನು ಒಳಗೊಂಡ ಕೃತಿ

ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮತ್ತು ಪ್ರೊ.ಎಸ್.ಜಿ.ಶಿವಶಂಕರ್ ಸಂಪಾದಕತ್ವದಲ್ಲಿ ಶರಣ ದರ್ಶನ ಹೆಸರಿನಲ್ಲಿ ಪ್ರಕಟಗೊಂಡಿರುವ ಈ ಕೃತಿ 600 ಪುಟಗಳನ್ನು ಒಳಗೊಂಡಿದೆ. 110 ಆನ್‌ಲೈನ್ ಪ್ರವಚನ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಐವತ್ತನ್ನು ಲೇಖನಗಳನ್ನಾಗಿಸಿ ಪ್ರಕಟಿಸಲಾಗಿದೆ. ವಿಶೇಷವೆಂದರೆ, ಇಲ್ಲಿನ ಲೇಖನಗಳಲ್ಲಿ ಪ್ರಸ್ತಾಪಿಸಲಾಗಿರುವ 50 ಮಂದಿ ಶರಣರು ಅಪ್ರಚಲಿತ ವಚನಕಾರರಾಗಿದ್ದಾರೆ. ವಚನರಚನೆಯ ಸಂಖ್ಯಾದೃಷ್ಟಿಯಿಂದ ಇದು ಅಷ್ಟೊಂದು ಪ್ರಮುಖರಲ್ಲದ ವಚನಕಾರರ ಒಲವು-ನಿಲುವುಗಳನ್ನು ಪರಿಚಯಿಸಸುವ ಕೃತಿ ಆಗಿದೆ. ವಚನಾಸಕ್ತ ಸಾಹಿತ್ಯದ ಅಭ್ಯಾಸಿಗಳಿಗೆ ಆಕರಗ್ರಂಥವೂ ಆಗಬೇಕೆಂಬ ಆಶಯವನ್ನು ಪರಿಷತ್ತು ಹೊಂದಿದೆ.

ಪರಿಚಯವಾಗಲಿ

ಪ್ರಚಲಿತರಲ್ಲದ ನೂರಾರು ವಚನಕಾರರ ವಚನಗಳಾಗಲಿ, ಬದುಕಾಗಲಿ ನಮಗೆ ಪರಿಚಯವಾಗಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಾವು ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನದ ವೇದಿಕೆ ಬಳಸಿಕೊಂಡು ಆ ಕೆಲಸ ಮಾಡಿದ್ದೆವು. ಆ ವಚನಕಾರರು ವರ್ತಮಾನದಲ್ಲೂ ಪ್ರಸ್ತುತರಾಗಬಲ್ಲರು ಎಂಬುದನ್ನು ತಿಳಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ನಾಡಿನ ವಿವಿಧ ಭಾಗದ ಲೇಖಕರು ನೀಡಿದ ಲೇಖನಗಳನ್ನು ಒಟ್ಟುಗೂಡಿಸಲಾಗಿದೆ ಎಂದು ಮ.ಗು.ಸದಾನಂದಯ್ಯ ತಿಳಿಸಿದರು.

ಅಪ್ರಚಲಿತ ಎಂದು ವಿಭಾಗಿಸುವುದು ಕೇವಲ ವಿಭಾಗಕ್ಕಾಗಿಯೇ ಹೊರತು, ಈ ಎಲ್ಲ ಶರಣರು ಅಂದು ಒಂದಲ್ಲ ಒಂದು ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ಮಹಾಮಹಿಮರೆ. ಕಾರಣ ಅವರ ಕುರಿತ ಓದು, ಅಧ್ಯಯನ, ಅಧ್ಯಾಪನ ಸರ್ವರಿಗೂ ತಲುಪಲಿ ಎಂಬ ಆಶಯ ನಮ್ಮದಾಗಿದೆ. ಅಪ್ರಚಲಿತ ಶರಣರ ಬಗ್ಗೆ ವಿಶೇಷ ಅಧ್ಯಯನ ನಡೆಸುವವರಿಗೆ ಪೂರಕ ಗ್ರಂಥವಾಗಲಿ ಎನ್ನುವುದು ನಮ್ಮ ಸದಾಶಯ ನಮ್ಮದಾಗಿದೆ. ಇನ್ನುಳಿದ ವಚನಕಾರರ ಕುರಿತೂ ಗ್ರಂಥ ಪ್ರಕಟಿಸಲು ಉದ್ದೇಶಿಸಲಾಗಿದೆ. ಲೇಖನ ಬರೆದು ಕೊಡುವಂತೆ ಉಪನ್ಯಾಸ ಮಾಡಿದವರನ್ನು ಕೇಳಿದ್ದೇವೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net