

ಕೆ.ಆರ್.ನಗರ: ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ಸರ್ಕಾರ ನಿರ್ಮಿಸಿರುವ ಜಿಲ್ಲಾ ಹೆದ್ದಾರಿಯಲ್ಲಿನ ಮ್ಯಾನ್‌ಹೋಲ್ ಮುಚ್ಚಳ ಕುಸಿದಿದ್ದು ವಾಹನಗಳ ರಸ್ತೆ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ.
ಪಟ್ಟಣದಲ್ಲಿ ಎರಡನೇ ಹಂತದ ಒಳ ಚರಂಡಿ ನಿರ್ಮಿಸಲಾಗಿದ್ದು, ಅದೇ ಯೋಜನೆಯಲ್ಲಿ ಮಧುವನಹಳ್ಳಿಯ 1ನೇ ವಾರ್ಡ್ ಮತ್ತು 23ನೇ ವಾರ್ಡಿನ ಮುಖ್ಯರಸ್ತೆ ಮಧ್ಯೆದಲ್ಲಿ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾದ ಒಳ ಚರಂಡಿಗಳ ಕಾಮಗಾರಿ ಕಳಪೆಯಿಂದ ಆಗಾಗ ಅಲ್ಲಲ್ಲಿ ಕುಸಿದು ಬೀಳುತ್ತಿರುವ ಮ್ಯಾನ್‌ಹೋಲ್‌ಗಳ ಸಮಸ್ಯೆ ಹೇಳತೀರದಾಗಿದೆ.
ಪಟ್ಟಣದ ಪುರಸಭೆ ವೃತ್ತದಿಂದ ಮಧುವನಹಳ್ಳಿ ಮೂಲಕ ಹಾದುಹೋಗುವ ಜಿ.ಜೆ.ಚೇತನ್ ಅವರ ಅಂಗಡಿ ಸಮೀಪ ರಸ್ತೆ ಮಧ್ಯೆದಲ್ಲಿಯೇ ಇರುವ ಒಳಚರಂಡಿ ಮ್ಯಾನ್‌ಹೋಲ್ ಮುಚ್ಚಳ ಪದೇಪದೆ ಕುಸಿದು ಬೀಳುತ್ತಿದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಮ್ಯಾನ್‌ಹೋಲ್ ಕಟ್ಟಿಕೊಂಡು ಗಲೀಜು ನೀರು ಮೇಲ್ಮುಖವಾಗಿ ಉಕ್ಕಿ ಹರಿಯುತ್ತದೆ. ಇದು ಸ್ಥಳೀಯರಿಗೆ, ರಸ್ತೆ ಸಂಚಾರಿಗಳಿಗೆ ದುರ್ವಾಸನೆಯಿಂದ ತೊಂದರೆ ಉಂಟುಮಾಡುವುದು ಒಂದೆಡೆಯಾದರೆ, ಮುಚ್ಚಳ ಕುಸಿದು ಹಲವಾರು ದಿನಗಳು ಕಳೆದರೂ ಪುರಸಭಾ ಅಧಿಕಾರಿಗಳು ಸರಿಪಡಿಸಲು ಮುಂದಾಗದೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ರಾಜ್ಯ ಹೆದ್ದಾರಿಯಾಗಿ ಕೆ.ಆರ್.ನಗರ, ಮಳಲಿ, ಹೊಸಕೋಟೆ ಮಾರ್ಗವಾಗಿ ರಾವಂದೂರು, ಬೆಟ್ಟದಪುರ ಮತ್ತು ಕುಶಾಲನಗರಕ್ಕೆ(ಕೆಎಂಎಚ್‌ಆರ್) ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು ದಿನ ನಿತ್ಯ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ಸಂಚರಿಸುತ್ತಾರೆ. ಅಲ್ಲದೇ ಒಳ ಚರಂಡಿಯ ಮ್ಯಾನ್‌ಹೋಲ್‌ಗಳು ಅವೈಜ್ಞಾನಿಕವಾಗಿ ರಸ್ತೆ ಮಧ್ಯೆದಲ್ಲಿಯೇ ನಿರ್ಮಿಸಿರುವುದರಿಂದ ವಾಹನಗಳು ಸಂಚರಿಸುವುದು ದುಸ್ಥರವಾಗಿದೆ. ಜತೆಗೆ ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸುವುದು ಕಷ್ಟಸಾಧ್ಯವಾಗಿದ್ದು, ಭಾರಿ ವಾಹನಗಳು ವಿಧಿ ಇಲ್ಲದೇ ಮ್ಯಾನ್‌ಹೋಲ್ ಮೇಲೆ ಸಂಚರಿಸಿದರೆ, ಪಾದಚಾರಿಗಳು ಸಂಚರಿಸಲು ಫುಟ್‌ಪಾತ್ ಇಲ್ಲದೆ ರಸ್ತೆ ಮಧ್ಯೆದಲ್ಲಿಯೇ ಸಂಚರಿಸಬೇಕಾಗಿದೆ. ಇದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ.
ಮ್ಯಾನ್‌ಹೋಲ್ ಮುಚ್ಚಳ ನಿರ್ಮಾಣವಾದಗಿನಿಂದ ಇದೇ ಸ್ಥಳದಲ್ಲಿ ಕಳಪೆ ಗುಣಮಟ್ಟದಿಂದ ಹತ್ತಾರು ಬಾರಿ ಕುಸಿಯುತ್ತಿದೆ. ಪದೇಪದೆ ಕುಸಿದು ಬೀಳುವ ಮ್ಯಾನ್ ಹೋಲ್ ಮುಚ್ಚಳ ಸಮಸ್ಯೆ ಮತ್ತು ಅಪಘಾತಗಳಿಂದ ಸ್ಥಳೀಯರಿಗೆ ಕಿರಿಕಿರಿ ಜತೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುವಂತೆ ಮಾಡಿದೆ. ಈ ಸಮಸ್ಯೆಗೆ ಪುರಸಭಾ ಅಧಿಕಾರಿಗಳ ಜತೆಗೆ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದು ಕ್ಷೇತ್ರದಲ್ಲಿ ನೂತನ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಶಾಸಕ ಡಿ.ರವಿಶಂಕರ್ ಇತ್ತ ಗಮನಹರಿಸಿ ಈ ಒಳಚರಂಡಿ ಗುಂಡಿ ಮುಚ್ಚಳವನ್ನು ಗುಣಮಟ್ಟದಿಂದ ನಿರ್ಮಿಸಿ ಸಾರ್ವಜನಿಕರು, ಸ್ಥಳೀಯರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಿ, ಅಪಘಾತಗಳಿಗೆ ಮುಕ್ತಿ ನೀಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ನಮ್ಮ ಈ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗಳು ನಿರ್ಮಾಣವಾದಗಿನಿಂದ ಪದೇಪದೆ ಮುಚ್ಚಳ ಕುಸಿದು ಬೀಳುತ್ತಿದ್ದು, ಗಲೀಜು ನೀರು ಮೇಲ್ಮುಖವಾಗಿ ಹರಿಯುವುದರಿಂದ ತೊಂದರೆಯಾಗುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡದೆ ಇರುವುದೇ ಇದಕ್ಕೆ ಕಾರಣವಾಗಿದೆ. ಅಧಿಕಾರಿಗಳಿಗೆ ದೂರು ಹೇಳಿ ಹೇಳಿ ಸಾಕಾಗಿದೆ. ಶಾಸಕರೇ ಇತ್ತ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಶಾಶ್ವತ ಪರಿಹಾರ ನೀಡಿ ಮುಂದೆ ಅನಾಹುತಗಳಾಗದಂತೆ ಕ್ರಮವಹಿಸಲಿ.
ವೆಂಕಟೇಶ್, ಸ್ಥಳೀಯ ನಿವಾಸಿ
ಇದೇ ರಸ್ತೆಯಲ್ಲಿ ಬೇರೆ ಮ್ಯಾನ್‌ಹೋಲ್ ಮುಚ್ಚಳಗಳು ಕುಸಿದಿದ್ದು, ಅವನ್ನು ಸರಿಪಡಿಸಲಾಗಿದೆ. ಈಗ ಮತ್ತೆ ಕುಸಿದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇಂತಹ ಸಮಸ್ಯೆಗಳು ಕಂಡುಬಂದರೆ ತಕ್ಷಣ ಸ್ಥಳೀಯರು ಪುರಸಭೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ ನಾಳೆಯೇ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಿ ಕುಸಿದಿರುವ ಮುಚ್ಚಳ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಚಂದ್ರಶೇಖರ್, ಜೆಇ, ಪುರಸಭೆ