

ಕೋಲಾರ: ತಾಲೂಕಿನ ಕುರ್ಕಿ ಗ್ರಾಮದಲ್ಲಿ ಮಂಗಳವಾರ ಒಕ್ಕಲಿಗ ಸಮುದಾಯದ ಈರಣ್ಯಸ್ವಾಮಿ ದೇವರ ದೊಡ್ಡ ದ್ಯಾವರ ಸಂಭ್ರಮ ಮನೆ ಮಾಡಿತ್ತು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಸೇರಿ ಮತ್ತೀತರರು ದ್ಯಾವರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
43 ವರ್ಷಗಳ ನಂತರ ಗ್ರಾಮದಲ್ಲಿ ಒಕ್ಕಲಿಗರ ಸಮುದಾಯದವರ ದೊಡ್ಡ ದ್ಯಾವರ ನಡೆಯುತ್ತಿದ್ದು, ಈ ಕಾರ್ಯಕ್ರಮಗಳು 5 ದಿನಗಳು ನಿರಂತರವಾಗಿ ಜರುಗಲಿವೆ. ಜಿಲ್ಲೆಯ ಮಾಲೂರು, ಕೋಲಾರ, ಬೆಂಗಳೂರು ಸೇರಿ ವಿವಿಧೆಡೆ ವಾಸವಿರುವ ಸಮುದಾಯದವರು ದ್ಯಾವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಈರಣ್ಯ ಸ್ವಾಮಿ ದೇವಾಲಯವು ದ್ಯಾವರ ಸಂಭ್ರಮದ ಕೇಂದ್ರಬಿಂದುವಾಗಿದ್ದು, ವಿಶೇಷ ಪೂಜೆ, ಮೆರವಣಿಗೆ, ಕಲಾತಂಡಗಳಿಂದ ನಾದಸ್ವರ, ತಮಟೆ ತಂಡಗಳು ಮೆರವಣಿಗೆಗೆ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮಣ್ಣ ಇತರರು ಪಾಲ್ಗೊಂಡಿದ್ದರು.
* ಆಕ್ಷಣದ ಸಂತೋಷಕ್ಕೆ ಬೆಲೆ ಕಟ್ಟಲಾಗದು
ದ್ಯಾವರ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಶೂದ್ರ ಸಮುದಾಯದ ಸಂಪ್ರದಾಯ, ಸಂಸತಿ, ಪರಂಪರೆ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಜೀವನದ ಜಂಜಾಟದಿಂದ ಹೊರ ಬರಬೇಕು, ಜೀವನದಲ್ಲಿ ಸಂತೋಷದ ಅನುಭವಗಳನ್ನು ಅನುಭವಿಸಬೇಕು. ಕಳೆದ 30 ವರ್ಷಗಳಿಂದ ಗ್ರಾಮಕ್ಕೆ ಬಂದಿರುವ ಸೊಸೆಯಂದಿರ ಜತೆಗೆ ಅಣ್ಣಮ್ಮಂದಿರು, ಹೆಣ್ಣು ಮಕ್ಕಳು, ಮಾವಂದಿರು ಬರುತ್ತಾರೆ. ಮನೆಯಲ್ಲಿ ನಾಲ್ಕೆ$ದು ಜನ ವಾಸ ಮಾಡೊದು ಬೇರೆ, ಈ ಕ್ಷಣಗಳಲ್ಲಿ ಒಂದು ಕಡೆ ಸೇರಿದರೆ ಸಿಗುವ ಸಂತೋಷವೇ ಬೇರೆ ಎಂದರು.
ಶೂದ್ರ ಸಮಾಜಕ್ಕೆ ಸೇರಿದವರಾಗಿದ್ದು, ಸಂಸತಿಯನ್ನು ಆಚರಣೆ ಮಾಡಬೇಕಾಗಿದೆ. ನಮ್ಮ ಸಂಸತಿ, ಜೀವನ ಶೈಲಿ, ಪರಂಪರೆಯಾಗಿದ್ದು, ಒಳ್ಳೆಯದನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
* ಹಬ್ಬದ ವಾತಾವರಣ
ಈರಣ್ಯ ದೇವರು ಒಕ್ಕಲಿಗ ಸಮುದಾಯದ ದ್ಯಾವರಾಗಿದ್ದು, ಹಬ್ಬದ ವಾತಾವರಣ ಶುರುವಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ನಾವು ವಾಸ ಇರೊದು ಕೊಮ್ಮನಹಳ್ಳಿಯಲ್ಲಿ, ಮನೆಯ ದೇವರು ಕುರ್ಕಿ ಈರಣ್ಯ ದೇವರು. ಇದರಿಂದಾಗಿ ಗ್ರಾಮಕ್ಕೂ ನಮಗೆ ಸಂಬಂಧ ಹೆಚ್ಚಿಸಿದೆ ಎಂದು ತಿಳಿಸಿದರು.