ಕುರುಬೂರು ಗ್ರಾಮದ ಬಳಿ ರಸ್ತೆ ಸಂಚಾರ ತಡೆ

ಹೆದ್ದಾರಿಯಲ್ಲಿ ಜಂಗಲ್ ಕಟ್ಟಿಂಗ್ ಮಾಡಿಸದೇ ನಿರ್ಲಕ್ಷ್ಯ ತೋರಿದ್ದರಿಂದ ರಸ್ತೆ ಅಪಘಾತದಲ್ಲಿ ರೈತ ಮುಖಂಡರೊಬ್ಬರು ಮೃತಪಟ್ಟಿದ್ದಾರೆಂದು ಆರೋಪಿಸಿ ಕುರುಬೂರು ಗ್ರಾಮದ ಬಳಿ ಶನಿವಾರ ರಸ್ತೆ ಸಂಚಾರ ತಡೆ ನಡೆಸಲಾಯಿತು. ವೀರೇಶ್, ಜಗಪತಿರಾವ್, ಮೂಗೂರು ಸಿದ್ದರಾಜು, ಶಾಂತರಾಜು, ಗೌರಿಶಂಕರ್, ಕುರುಬೂರು ನಂದೀಶ್ ಇತರರಿದ್ದರು.
26tnpnewsfile01 (4)
Published on

ತಿ.ನರಸೀಪುರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿ ಜಂಗಲ್ ಕಟ್ಟಿಂಗ್ ಮಾಡಿಸದೇ ನಿರ್ಲಕ್ಷ್ಯ ತೋರಿದ್ದರಿಂದ ರಸ್ತೆ ಅಪಘಾತದಲ್ಲಿ ರೈತ ಮುಖಂಡರೊಬ್ಬರು ಮೃತಪಟ್ಟಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಕುರುಬೂರು ಗ್ರಾಮದ ಬಳಿ ಶನಿವಾರ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಕುರುಬೂರು ಕೆ.ಎನ್.ನಾಗರಾಜು (72) ಎಂಬುವರು ತಮ್ಮ ಮಗ ಕೆ.ಎನ್.ರಾಜೇಶ್ ಅವರೊಂದಿಗೆ ಮೊಪೆಡ್‌ನಲ್ಲಿ ಶನಿವಾರ ಬೆಳಗ್ಗೆ ಗದ್ದೆಗೆ ತೆರಳಿ ವಾಪಸ್ ಗ್ರಾಮಕ್ಕೆ ತೆರಳುವ ವೇಳೆ ರಸ್ತೆ ದಾಟುವಾಗ ಕೊಳ್ಳೇಗಾಲ ಕಡೆಯಿಂದ ಅತಿ ವೇಗವಾಗಿ ಬೈಕ್‌ನಲ್ಲಿ ಬಂದ ಕೊಳ್ಳೇಗಾಲ ತಾಲೂಕು ಕೌದಳ್ಳಿ ಗ್ರಾಮದ ಶ್ರೇಯಸ್ ಮೊಪೆಡ್‌ಗೆ ಡಿಕ್ಕಿ ಹೊಡೆದಿದ್ದರಿಂದ ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಪೆಡ್ ಚಾಲನೆ ಮಾಡುತ್ತಿದ್ದ ರಾಜೇಶ್ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದ ಗ್ರಾಮಸ್ಥರು ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಬೆಳೆದಿರುವ ಮರದ ಕೊಂಬೆಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಪದೇ ಪದೆ ರಸ್ತೆ ಅಪಘಾತಗಳಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಶವವನ್ನು ರಸ್ತೆಗೆ ಅಡ್ಡಲಾಗಿಟ್ಟು ವಾಹನಗಳ ಸಂಚಾರ ತಡೆದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಜಂಗಲ್ ಕಟ್ಟಿಂಗ್ ಆಗದ ಹಿನ್ನೆಲೆಯಲ್ಲಿ ರಸ್ತೆ ಅಪಘಾತವಾಗಿ 10 ಜನರು ಜೀವ ಕಳೆದು ೊಂಡಿದ್ದರು. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಜಂಗಲ್ ಕಟ್ಟಿಂಗ್ ಮಾಡಿಸುವ ಭರವಸೆ ನೀಡಿ ಉದಾಸೀನ ಮಾಡಿದ್ದರು.ಅಧಿಕಾರಿಗಳ ಅಸಡ್ಡೆಯಿಂದಾಗಿ ಮತ್ತೆ ರೈತ ಮುಖಂಡರೊಬ್ಬರು ಮೃತರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿದರು. ಕೂಡಲೇ ರಸ್ತೆಯಲ್ಲಿ ಬೆಳೆದ ಜಂಗಲ್ ಕಟ್ಟಿಂಗ್ ಮಾಡಿಸಬೇಕು. ಗ್ರಾಮದ ಕೆಲವೆಡೆ ರಸ್ತೆ ಡುಬ್ಬ ನಿರ್ಮಿಸಬೇಕೆಂದು ಒತ್ತಾಯಿಸಿದರು.


ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಅಥವಾ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ರಸ್ತೆ ಸಂಚಾರ ತಡೆ ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಸುಮಾರು ಆರು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆದಿದ್ದರಿಂದ ಸವಾರರ ತೊಂದರೆ ಅನುಭವಿಸಿದರು. ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಿದವು.


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ನಂದಿನಿ ಹಾಗೂ ತಹಸೀಲ್ದಾರ್‌ಟಿ.ಜಿ.ಸುರೇಶ್ ಆಚಾರ್ ಪ್ರತಿಭಟನಾನಿರತರ ಮನವೊಲಿಸಲು ಮುಂದಾದರು. ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಪಟ್ಟುಹಿಡಿದರು.


ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಮಾತನಾಡಿ. ಭಾನುವಾರ ಬೆಳಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರಣೆ ಮಾಡಲಾಗುವುದು. ಅನಾಹುತಗಳಿಗೆ ಸ್ಪಷ್ಟ ಉತ್ತರ ಕೇಳಲಾಗುವುದು. ಮುಂದೆ ಇಂತಹ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗುವುದು. ಜತೆಗೆ ಮೃತರ ಕುಟುಂಬಕ್ಕೆ ನೀಡಬೇಕಾದ ಪರಿಹಾರದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾನಿರತರು ರಸ್ತೆ ಸಂಚಾರ ತಡೆ ಅಂತ್ಯಗೊಳಿಸಿದರು.


ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್, ಜಗಪತಿರಾವ್, ಮೂಗೂರು ಸಿದ್ದರಾಜು, ಶಾಂತರಾಜು, ಗೌರಿಶಂಕರ್, ಕುರುಬೂರು ನಂದೀಶ್, ಬೃಂಗೇಶ್, ಕುಮಾರ, ಸುರೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net