

ಕಡೂರು: ತಾಲೂಕಿನ ಅಧಿದೇವತೆ ಅಂತರಘಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕುರಿಮರಿಗಳ ಸಂತೆ ವ್ಯಾಪಾರದಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯಿತು.
ಭಾನುವಾರ ತಡರಾತ್ರಿಯಿಂದಲೇ ಕುರಿ ವ್ಯಾಪಾರಸ್ಥರು ಬಿಡಾರ ಹೂಡಿದ್ದರು. ಬೆಳಗ್ಗೆ ಆರಂಭಗೊಂಡ ಕುರಿಸಂತೆ ವ್ಯಾಪಾರದಲ್ಲಿ ತಾಲೂಕಿನ ಬಿಳುವಾಲ, ಬಾಸೂರು, ಗೌಡನಕಟ್ಟೆಹಳ್ಳಿ ಸೇರಿದಂತೆ ನೆರೆಯ ಜಿಲ್ಲೆಗಳಾದ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾರಿಕಣಿವೆ, ಚಿತ್ರದುರ್ಗ, ಹೊಸದುರ್ಗ, ಬಾಗಲಕೋಟೆ, ವಿಜಯಪುರದಂತಹ ಉತ್ತರ ಕರ್ನಾಟಕ ಭಾಗದಿಂದಲೂ ಕುರಿಮರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.
ಕುರಿ ಮರಿಯ ಗಾತ್ರ ಮತ್ತು ವಯಸ್ಸಿನ ಅನುಗುಣವಾಗಿ ಚೌಕಾಸಿ ವ್ಯಾಪಾರದೊಂದಿಗೆ ಆರಂಭವಾಗಿ ನೋಟಿನ ಕಂತೆ ಹಿಡಿದುಕೊಂಡೆ ವಿಶೇಷ ತಳಿಗಳ ಕುರಿಯನ್ನು ಪೈಪೋಟಿಯಲ್ಲಿ ಗ್ರಾಹಕರು ಖರೀದಿಸಿದರು. ಇನ್ನು ಒಂದು ಕುರಿಯ ಬೆಲೆಯು ಸುಮಾರು 10 ಸಾವಿರದಿಂದ ಆರಂಭಗೊಂಡು 65 ಸಾವಿರ ರೂ. ವರೆಗೆ ಮಾರಾಟವಾದವು. ಕಳೆದ ಬಾರಿಗಿಂತ ಈ ಬಾರಿ ಟಗರು ಮರಿಗಳಿಗಿಂತ ಕುರಿಮರಿಗಳ ಬೆಲೆಯು 4ರಿಂದ 5 ಸಾವಿರ ರೂ.ವರೆಗೆ ಹೆಚ್ಚಾಗಿದ್ದು ಗ್ರಾಹಕರ ಕೈಸುಡುವಂತಾಯಿತು.
ಪ್ರತಿ ಸೋಮವಾರದ ಸಂತೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಕುರಿ ವ್ಯಾಪಾರ ನಡೆಯುತ್ತಿತ್ತು. ಹಬ್ಬದ ವಿಶೇಷತೆ ಅಂಗವಾಗಿ ಬೆಳಗ್ಗೆ ಆರಂಭವಾದ ಕುರಿ ಸಂತೆ ವ್ಯಾಪಾರ ಸಂಜೆಯ ತನಕ ನಡೆದಿದ್ದು ಸುಮಾರು 8 ಸಾವಿರಕ್ಕೂ ಹೆಚ್ಚು ಮರಿಗಳು ಸಂತೆಯಲ್ಲಿ ಮಾರಾಟವಾದವು.