ಕುತೂಹಲ ಮೂಡಿಸಿರುವ ಜಿಲ್ಲೆಯ ಕಾಂಗ್ರೇಸ್ ಶಾಸಕರ ನಡೆ / ಡಿಕೆಶಿಯನ್ನು ಭೇಟಿ ಮಾಡಿದ ಶಾಸಕ ಕೊತ್ತೂರು ಬಣ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯ ಕಾಂಗ್ರೇಸ್ ಶಾಸಕರಲ್ಲಿ ೨ ಬಣಗಳಾಗಿದ್ದು, ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿದ್ದು, ಇವರ ಜಗಳ ಬೀದಿಗೆ ಬಂದAತಾಗಿದ್ದು, ಶನಿವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಒಂದು ಬಣ ಭೇಟಿ ಮಾಡಿದ್ದು, ಇದು ಕುತೂಹಲ ಮೂಡಿಸಿದೆ.

ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ತು ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಶನಿವಾರ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಿಚಾರವನ್ನು ಡಿ.ಕೆ.ಶಿವಕುಮಾರ್ ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ.

ಇತ್ತೀಚಿಗೆ ಜಿಲ್ಲೆಯ ಕಾಂಗ್ರೇಸ್‌ನ ಶಾಸಕರಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕೆಪಿಸಿಸಿ ಅಂಗಳಕ್ಕೂ ತಲುಪುವಂತಾಗಿದೆ. ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ಅನುದಾನವನ್ನು ಬಜೆಟ್‌ನಲ್ಲಿ ಸೇರಿಸುವಂತೆ ಡಿ.ಕೆ.ಶಿವಕುಮಾರ್ ರವರು ಜಲ ಸಂಪನ್ಮೂಲ ಸಚಿವರಾಗಿರುವ ಕಾರಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂಬುದು ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿರುವ ಒಂದು ಬಣದ ಶಾಸಕರ ಮಾತಾಗಿದೆ.

ಕಳೆದ ೧೫ ದಿನಗಳಿಂದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಚಿಮುಲ್ ಹಗರವನ್ನು ತನಿಖೆ ನಡೆಸುವಂತೆ ಮಾಧ್ಯಮಗಳ ಮೂಲಕ ಒತ್ತಾಯಪಡಿಸುತ್ತಿದ್ದರು. ಇತ್ತೀಚೆಗೆ ಕೆ.ಜಿ.ಎಫ್.ಶಾಸಕಿ ರೂಪಕಲಾ ರವರು ಸಹ ಕೋಚಿಮುಲ್ ಮತ್ತು ಡಿ.ಸಿ.ಸಿ.ಬ್ಯಾಂಕ್ ಗೆ ಚುನಾವಣೆ ನಡೆಸದೆ ಹಾಳು ಮಾಡಲಾಗುತ್ತಿದೆ ಎಂದು ಜಿಲ್ಲೆಯ ಕಾಂಗ್ರೇಸ್ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.

ಶುಕ್ರವಾರ ಮುಳಬಾಗಿಲಿನ ಆವಣಿಯಲ್ಲಿ ನಡೆದ ಜಾತ್ರಾ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಣ ಹಾಗೂ ಡಿ.ಡಿ.ಸಿ.ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ವಿರುದ್ದ ತಿರುಗಿ ಬಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯದೇ ಇರಲು ಕಾರಣ ಬ್ಯಾಂಕಿನ ಮಾಜಿ ಅಧ್ಯಕ್ಷರೇ ಪ್ರತಿಯೊಂದು ಪ್ರಕರಣಕ್ಕೂ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಏಕೆ? ಡಿಸಿಸಿ ಬ್ಯಾಂಕ್ ತನಿಖೆಯಾಗಲಿ, ಕೋಚಿಮುಲ್ ತನಿಖೆಯಾಗಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಅನಿಲ್‌ಕುಮಾರ್ ಸವಾಲು ಹಾಕಿದ್ದರು.

ಶನಿವಾರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್‌ಕುಮಾರ್ ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದ್ದು, ಇದು ಸಾಮಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಜಿಲ್ಲೆಯ ಕಾಂಗ್ರೇಸ್ ಶಾಸಕ ಭಿನ್ನಮತಕ್ಕೆ ತುಪ್ಪ ಸುರಿದಂತೆ ಆಗಿದೆ.

ಕೋಟ್

ಎತ್ತಿನಹೋಳೆ ಕಾಮಗಾರಿಯ ಪೈಪ್‌ಲೈನ್ ಅರ್ಧಕ್ಕೆ ನಿಂತಿದೆ. ಕೋಲಾರಕ್ಕೆ ಎತ್ತಿನಹೊಳೆ ನೀರು ತರುವುದೇ ನಮಗೆ ಮುಖ್ಯ. ಉಪಮುಖ್ಯಮಂತ್ರಿಗಳು ಜಲ ಸಂಪನ್ಮೂಲ ಸಚಿವರಾಗಿರುವ ಕಾರಣ ಎತ್ತಿನಹೊಳೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಅವರಿಗೆ ಮನವಿ ಸಲ್ಲಿಸಲು ಹೋಗಿದ್ದೇವೆ. ಜಿಲ್ಲೆಯ ರಾಜಕೀಯ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿಗಳಿಗಾಗಲಿ ಉಪಮುಖ್ಯಮಂತ್ರಿಗಳಿಗಾಗಲಿ ಈಗ ಸಮಯವಿಲ್ಲ. ನಾವು ಯಾರ ವಿರುದ್ಧವೂ ದೂರು ನೀಡಲು ಹೋಗಿಲ್ಲ. ಇದು ಮಾಧ್ಯಮಗಳ ಸೃಷ್ಟಿಯಾಗಿದೆ.

-ಎಂ.ಎಲ್.ಸಿ. ಎಂ.ಎಲ್.ಅನಿಲ್‌ಕುಮಾರ್,

ಕೋಟ್

ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ. ಜಿಲ್ಲೆಯ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುತ್ತೇವೆ. ಅವರವರ ಕ್ಷೇತ್ರಕ್ಕೆ ಸಂಬAಧಿಸಿದAತೆ ಆಯಾ ಶಾಸಕರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ. ಕೋಲಾರ ಕ್ಷೇತ್ರದ ಬಗ್ಗೆ ನಾನು ಮನವಿ ಸಲ್ಲಿಸಿದ್ದೇನೆ. ವಿಶೇಷವಾಗಿ ಎತ್ತಿನಹೊಳೆ ನೀರು ಈ ಭಾಗಕ್ಕೆ ಅವಶ್ಯಕತೆ ಇದೆ. ಅದಕ್ಕಾಗಿ ಉಪಮುಖ್ಯಮಂತ್ರಿಗಳ ಬಳಿ ಚರ್ಚಿಸಲು ಹೋಗಿದ್ದು ನಿಜ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ.

-ಶಾಸಕ ಕೊತ್ತೂರು ಮಂಜುನಾಥ್

ಚಿತ್ರ ೦೨ ಕೆ.ಎಲ್.ಆರ್. ೦೬ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ನಂಜೇಗೌಡ, ಎಂ.ಎಲ್.ಸಿ. ಅನಿಲ್‌ಕುಮಾರ್.

ಚಿತ್ರ ೦೨ ಕೆ.ಎಲ್.ಆರ್. ೦೬ಎ : ಎಂ.ಎಲ್.ಸಿ. ಎಂ.ಎಲ್.ಅನಿಲ್‌ಕುಮಾರ್ ರವರ ಭಾವಚಿತ್ರ

ಚಿತ್ರ ೦೨ ಕೆ.ಎಲ್.ಆರ್. ೦೬ಬಿ : ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net