

ಹೊಸನಗರ: ಕೊಡಚಾದ್ರಿ ಗಿರಿಕಂದರದ ನಡುವೆ ನೆಲೆಗೊಂಡಿರುವ ಜಲ ದುರ್ಗಾಪರಮೇಶ್ವರಿ ಸಪರಿವಾರ ದೇವತೆಗಳ ಸನ್ನಿಧಿಯಲ್ಲಿ ಸಂಕ್ರಾಂತಿ ಆಚರಿಸಲಾಯಿತು.
ವಳೂರು ಗ್ರಾಮದ ಸಂಪದಮನೆಯ ಶ್ರೀಕ್ಷೇತ್ರವಾಗಿ ಕುಡುಬಿ ಸಮುದಾಯದ ಆರಾಧ್ಯ ದೇವತೆಗಳಾದ ಶ್ರೀ ಚೌಡೇಶ್ವರಿ, ಶ್ರೀ ಯಕ್ಷಿಣಿ, ಶ್ರೀ ಜಲದುರ್ಗಾ ಪರಮೇಶ್ವರಿಯ ಸನ್ನಿಧಿಯಲ್ಲಿ ಸಂಕ್ರಾಂತಿಯನ್ನು ಜಾತ್ರಾ ಮಹೋತ್ಸವದಂತೆ ಆಚರಿಸಲಾಯಿತು.
ಸಂಕ್ರಾಂತಿ ಅಂಗವಾಗಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಪ್ರಧಾನ ಸಂಕಲ್ಪ, ತುಲಾಭಾರ ಸೇವೆ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ, ಕುಂಕುಮಾರ್ಚನೆ, ಶ್ರೀ ದೇವರಿಗೆ ಕಲಾತತ್ವ ಹೋಮ, ಕಲಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಿತು.
ವಿವಿಧ ಪ್ರಾರ್ಥನೆಗಳು ಈಡೇರಿದ ಕಾರಣ ಹರಕೆ ಸಮರ್ಪಿಸಿದರು. ದೇವಿಯನ್ನು ಆಹ್ವಾನಿಸಿ ನುಡಿ ದರ್ಶನ ನೀಡಲಾಯಿತು. ಮೂರು ದೇವತೆಗಳ ಅಲಂಕಾರ, ಸಂಪಾ ನದಿ ತೀರದಲ್ಲಿ ವಾದ್ಯಘೋಷಗಳೊಂದಿಗೆ ಗಂಗಾರತಿ ಆಚರಿಸಲಾಯಿತು. ಇಸ್ಕಾನ್ ಟೆಂಪಲ್ ಭಕ್ತರು ಭಜನೆ ಮಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಸಂಪದಮನೆ ಶಿವರಾಮ ಎನ್.ಶೆಟ್ಟಿ ಮಾತನಾಡಿ, ದಟ್ಟಾರಣ್ಯ ಮಧ್ಯದಲ್ಲಿರುವ ಶ್ರೀದೇವಿಯನ್ನು ಇಲ್ಲಿಯ ಕುಡುಬಿ ಜನಾಂಗ, ಕಾಡು ನಿವಾಸಿಗಳು ಆರಾಧಿಸುತ್ತಿದ್ದಾರೆ. ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲು ವನ್ಯಜೀವಿ ಇಲಾಖೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಪುರೋಹಿತರಾದ ಗೋಪಾಲಕೃಷ್ಣ ಭಟ್, ಸಮಿತಿ ಕಾರ್ಯದರ್ಶಿ ರಾಜು ಉಡ್ನೇಸರ, ಪಾತ್ರಿಗಳಾದ ಆಲುಗೌಡ, ಜಯರಾಮ ಶೆಟ್ಟಿ, ಗುರುಮೂರ್ತಿ, ನರಸಿಂಹ ಪೂಜಾರಿ, ಕುಂಬ್ಳೆ ಸುರೇಶ, ಚಂದಯ್ಯ ಜೈನ್, ಗಾಯತ್ರಿ ಸುಧೀರ್, ಸದಾರಾಮ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಅರುಣ್, ಅರ್ಚಕ ಸುಬ್ರಹ್ಮಣ್ಯ ಭಟ್ ಇತರರಿದ್ದರು.