

ಶಾಸಕ ಕೆ.ಹರೀಶ್‌ಗೌಡ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂಟಿಕೊಪ್ಪಲು(ವಾರ್ಡ್ ನಂಬರ್ 22) ವ್ಯಾಪ್ತಿಯಲ್ಲಿ ಗುರುವಾರ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಸ್ಪೀಕರಿಸಿದರು.
ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸದಿರುವುದರ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂತು. ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಒಂಟಿಕೊಪ್ಪಲಿನ ಸಮಗ್ರ ಅಭಿವೃದ್ಧಿಗೂ ಸೂಚನೆ ನೀಡಿದರು.
ಪುಂಡರ ಹಾವಳಿ ತಪ್ಪಿಸಲು ಕಾಲೇಜು ಹಾಗೂ ಉದ್ಯಾನವನ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕಿರಿದಾದ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಅವೈಜ್ಞಾನಿಕವಾಗಿದ್ದು, ಅದನ್ನು ಸ್ಥಳಾಂತರಗೊಳಿಸುವಂತೆ ಹೇಳಿದರು. ಇದೇ ವೇಳೆ ಹಲವಾರು ಅಡ್ಡ ರಸ್ತೆಗಳ ಮಳೆ ನೀರು ಚರಂಡಿ ಹಳೆಯದಾಗಿದ್ದು, ನೂತನವಾಗಿ ನಿರ್ಮಿಸುವುದು, ಹಳೆಯದಾದ ಒಳಚರಂಡಿ ಪೈಪ್‌ಲೈನ್ ಅನ್ನು ಬದಲಿಸಲು ಪಾಲಿಕೆ ಅಭಿವೃಧ್ಧಿ ಅಧಿಕಾರಿಗೆ ಸೂಚಿಸಿದರು
ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ರಮೇಶ್, ಭಾಗ್ಯಾ ಮಹದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ವಾರ್ಡ್ ಅಧ್ಯಕ್ಷ ಕುಮಾರ್, ಚಾಮುರಾಜ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್, ಮುಖಂಡರಾದ ಪೈಲ್ವಾನ್ ಪ್ರಕಾಶ್, ಒಂಟಿಕೊಪ್ಪಲು ಗುರುರಾಜ್, ಜಗದೀಶ್, ಮಧು, ಮಹದೇವಸ್ವಾಮಿ, ಶ್ರೀಕಂಠು, ಶ್ರೀರಾಮ್, ಜಗದೀಶ್, ಪ್ರೇಮ್ ಕುಮಾರ್, ಸುಮಾ ನಾಗರಾಜ್, ಲಕ್ಷ್ಮೀ, ಟೆಂಟ್ ಹೌಸ್ ನಾಗರಾಜ್, ಮಂಜು, ಚರಣರಾಜ್ ಇತರರಿದ್ದರು.