

ಬೆಂಗಳೂರು : ರಾಜ್ಯದ ಜೈಲಿನಲ್ಲಿ ಇರುವ ಕೈದಿಗಳ ಭೇಟಿಗೆ ವಿಧಿಸಿದ್ದ ನಿರ್ಬಂಧಕ್ಕೆ ಪರಿಹಾರವಾಗಿ ಕಾರಾಗೃಹ ಇಲಾಖೆ ವಿಡಿಯೋ ಕಾನ್ಪೆರನ್ಸ್ ಮೂಲಕ ಸಂದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಕರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಭೇಟಿಗೆ ಇಲಾಖೆ ಮುಖ್ಯಸ್ಥ ಅಲೋಕ್ ಮೋಹನ್ ನಿರ್ಬಂಧ ವಿಧಿಸಿದ್ದರು. ಏಳೆಂಟು ತಿಂಗಳಿಂದ ಕೈದಿಗಳು ಕುಟುಂಬದ ಸದಸ್ಯರು ಮತ್ತು ವಕೀಲರು ಸೇರಿದಂತೆ ಹೊರಗಿನವರ ಜತೆ ಸಂದರ್ಶನಕ್ಕೆ ಅವಕಾಶ ನಿಲ್ಲಿಸಲಾಗಿತ್ತು. ಇದರಿಂದ ಕೆಲ ಕೈದಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಕೈದಿಗಳ ಕುಟುಂಬಗಳಿಂದಲೂ ಭೇಟಿಗೆ ಆಗ್ರಹ ಕೇಳಿ ಬಂದಿತ್ತು.
ಒತ್ತಾಯಕ್ಕೆ ಮಣಿದ ರಾಜ್ಯ ಕಾರಾಗೃಹ ಇಲಾಖೆ ಮುಖ್ಯಸ್ಥ ಅಲೋಕ್ ಕುಮಾರ್, ವಿಡಿಯೋ ಕಾನ್ಫೆರನ್ಸ್ ಮೂಲಕ ಕೈದಿಗಳ ಜತೆ ಮಾತುಕತೆಗೆ ಅನುವು ಮಾಡಿಕೊಡಲು ಮುಂದಾಗಿದ್ದಾರೆ. ಈ ಸಂಬಂಧ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದ್ದು, ತಾಂತ್ರಿಕ ಕೆಲಸಗಳು ಬರದಿಂದ ಸಾಗಿವೆ. ಮುಂದಿನ ವಾರದಿಂದ ವಿಡಿಯೋ ಸಂದರ್ಶನಕ್ಕೆ ಯೋಜನೆ ರೂಪಿಸುತ್ತಿದ್ದಾರೆ.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪರಪ್ಪನ ಅಗ್ರಹಾರ ಸೇರಿದಂತೆ ಕೇಂದ್ರ ಕಾರಾಗೃಹಗಳಲ್ಲಿ ಜಾರಿಗೊಳಿಸಲಾಗುತ್ತದೆ. ಇಲ್ಲಿನ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಮುಂದಿನ ಹಂತದಲ್ಲಿ ಎಲ್ಲ ಜೈಲಿನಲ್ಲಿ ವಿಡಿಯೋ ಕಾನ್ಸ್‌ರೆನ್ಸ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.