ಕೀಳರಿಮೆ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ

1
Published on

ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆ ಬಿಟ್ಟು ಛಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಎಂದು ಕೃಷಿಕ್ ಸರ್ವೋದಯ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ವೈ.ಕೆ.ಪುಟ್ಟಸೋಮೇಗೌಡ ಕರೆ ನೀಡಿದರು.

ಕೆಎಸ್‌ಎಫ್ ಅಕಾಡೆಮಿಯಿಂದ ವಿಜಯನಗರ ಎರಡನೇ ಹಂತದ ಕೃಷಿಕ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕೆ-ಸಿಇಟಿ, ನೀಟ್ ಪರೀಕ್ಷೆ ತರಬೇತಿ ಶಿಬಿರದ ಸಮಾರೋಪ ಭಾಷಣ ಮಾಡಿದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ಕಾನ್ವೆಂಟ್‌ಗಳಲ್ಲಿ ಓದಿದ ಮಕ್ಕಳ ಜತೆ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧಿಸಲು ಸಾಧ್ಯವಿಲ್ಲ. ಅವರಿಗೆ ತರಬೇತಿ ನೀಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಅನ್ನು ಆರಂಭಿಸಲಾಗಿದೆ. ಆದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳು ಸವಾಲನ್ನು ಗಟ್ಟಿತನದಿಂದ ಎದುರಿಸಬೇಕು. ವೆದ್ಯರು, ಇಂಜಿನಿಯರುಗಳು ಮಾತ್ರವಲ್ಲದೆ ಐಎಎಸ್, ಐಪಿಎಸ್ ಮೊದಲಾದ ಪರೀಕ್ಷೆಗಳನ್ನು ಪಾಸು ಮಾಡಬೇಕು ಎಂದರು.

ಈಗ ಸಿಇಟಿ, ನೀಟ್ ತರಬೇತಿ ಪಡೆದವರು ಮುಂದೆ ಐಎಎಸ್, ಐಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ಬಯಸಿದರೆ ಸಂಸ್ಥೆಯ ಬಾಗಿಲು ಸದಾ ತೆರೆದಿರುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ಕೃಷಿಕ್ ಸರ್ವೋದಯ ಫೌಂಡೇಷನ್ ಟ್ರಸ್ಟ್ ಮೆಸೂರು ಶಾಖೆ ಅಧ್ಯಕ್ಷ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ಟ್ರಸ್ಟ್ ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ 80 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತಿದೆ. ಮೆಸೂರು ಕೇಂದ್ರವು 10 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತಿದೆ. ಇದರ ಸದುಪಯೋಗ ಪಡೆದು, ಇಲ್ಲಿ ತರಬೇತಿ ಪಡೆದವರು ಮುಂದೆ ಸಂಸ್ಥೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂದರು.

ಆಲೋಚನೆ, ಮಾತು ಮತ್ತು ಕೃತಿಯಿಂದ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ನಿವೃತ್ತ ವಿಶೇಷ ಕಾರ್ಯದರ್ಶಿ ಡಾ.ಪಿ. ಬೋರೇಗೌಡ ಮಾತನಾಡಿ, ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಫಾಲೋ ಅಪ್ ಕೆಲಸ ಆಗಬೇಕು. ಪ್ರೌಢಶಾಲಾ ಹಂತದಿಂದಲೇ ಈ ಸಂಸ್ಥೆಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸ ಆಗಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು, ಅತ್ಯುತ್ತಮವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಕಠಿಣ ಪರಿಶ್ರಮದಿಂದ ಓದಿದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದರು.

ಈಗ ಚೆನ್ನಾಗಿ ಓದಿದರೆ ಎಲ್ಲಿ ಬೇಕಾದರೂ ಉದ್ಯೋಗ ಸಿಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡಬೇಕು. ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜದ ಋಣವನ್ನು ತೀರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ, ಕೃಷಿಕ್ ಸರ್ವೋದಯ ಫೌಂಡೇಷನ್ ಟ್ರಸ್ಟ್ ಉಪಾಧ್ಯಕ್ಷ ಬಿ.ಕೆ. ಶಿವಣ್ಣ, ಎನ್. ನಂಜೇಗೌಡ, ಜಂಟಿ ಕಾರ್ಯದರ್ಶಿ ವೆ.ಕೆ. ಕೆಂಚೇಗೌಡ, ಖಜಾಂಚಿ ಎಸ್.ವಿ. ಗೌಡಪ್ಪ, ಟ್ರಸ್ಟಿಗಳಾದ ಕೆ.ಎಂ. ಚಂದ್ರೇಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net