ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರಿಗೆ ಶಕ್ತಿ

2
Published on

ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರಿಗೆ ಶಕ್ತಿಯಾಗಿದ್ದ ಧೀರ ಮಹಿಳೆ. ಜೀವನದುದ್ದಕ್ಕೂ ಹೋರಾಟ ನಡೆಸಿದ ದಿಟ್ಟ ಮಹಿಳೆ ಎಂದು ಕರ್ನಾಟಕ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ವತಿಯಿಂದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಮನೆ ಮಾತಾಗಿದ್ದಾರೆ. 18ನೇ ಶತಮಾನದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜಯ ಪಡೆದರು. ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ಬ್ರಿಟಿಷರ ವಿರುದ್ಧ ಅವರ ವೀರ ಹೋರಾಟ ಇತಿಹಾಸದ ಪುಟದಲ್ಲಿ ಬರೆದಿಡುವಂತೆ ಮಾಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟದ ನಂತರ ಸ್ವಾತಂತ್ರ್ಯ ಪಡೆಯಲು ಅನೇಕ ಹೋರಾಟಗಾರರಿಗೆ ಪ್ರೇರಣೆಯಾಗಿದ್ದಾರೆ ಎಂದು ಬಣ್ಣಿಸಿದರು.

ಬ್ರಿಟಿಷ್‌ರ ಆಳ್ವಿಕೆ ಕಾಲದಲ್ಲಿ ರಾಜ ಮತ್ತು ಸಮಾಂತರು ಬ್ರಿಟಿಷ್‌ರಿಗೆ ಕಪ್ಪ ನೀಡುತ್ತಿದ್ದರು. ಆದರೆ ಅದನ್ನು ಕಿತ್ತೂರು ರಾಣಿ ಚೆನ್ನಮ್ಮ ವಿರೋಧಿಸಿ ನಿಮಗೇಕೆ ಕೊಡಬೇಕು ಕಪ್ಪ ಎಂದು ಹೋರಾಟ ಮಾಡಿದ ಏಕೈಕ ಮಹಿಳೆ. ಸಮಾಜದಲ್ಲಿ ಹೆಣ್ಣು ಮಕ್ಕಳು ತಪ್ಪನ್ನು ವಿರೋಧಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದರು.

ಪುಜಾಪ್ರಭುತ್ವ, ಐಕ್ಯತೆ, ನಾಡು-ನುಡಿಗೆ ಧಕ್ಕೆಯಾದಾಗ ವಿರೋಧ ಶಕ್ತಿಗಳ ವಿರುದ್ಧ ಸಾರ್ವಜನಿಕರು ಗಟ್ಟಿಯಾಗಿ ನಿಲ್ಲಬೇಕಿದೆ. ಸೋತಾಗ ಕುಗ್ಗದೆ ಬದುಕುವ, ಬೆಳೆಯುವ ಶಕ್ತಿಯನ್ನು ರೂಢಿಸಿಕೊಳ್ಳಿ. ಯಾವುದೇ ಅನ್ಯಾಯವಾದರೂ ಎದುರಿಸಿ ನಿಲ್ಲಬೇಕು ಎಂದು ಹೇಳಿದರು.

ಸಾಹಿತಿ ಡಾ.ಸುಜಾತಾ ಅಕ್ಕಿ ಮಾತನಾಡಿ, ಬ್ರಿಟಿಷರು ವ್ಯಾಪಾರಕ್ಕೋಸ್ಕರ ಭಾರತಕ್ಕೆ ಬಂದರು. ನಂತರ ನಮ್ಮಲ್ಲಿದ್ದ ಸಂಪನ್ಮೂಲ, ಮಸಾಲೆ ಪದಾರ್ಥಗಳನ್ನು ಹೊತ್ತು ಹೋದರು. ನಂತರ ಇಲ್ಲಿಯ ಶ್ರೀಮಂತಿಕೆಯನ್ನು ಸವಿಯುತ್ತ ಇಲ್ಲೇ ನೆಲೆಸಿದರು. ಸಂಘಟನೆಯ ಕೊರತೆಯನ್ನು ಉಪಯೋಗಿಸಿಕೊಂಡು ಬ್ರಿಟಿಷರು ಭಾರತಲ್ಲೇ ನೆಲೆಯೂರಿದರು. ವ್ಯಾಪಾರ ಮಾಡುತ್ತಾ ಮಾಡುತ್ತಾ ಎಲ್ಲ ಸಂಸ್ಥಾನಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅಂತಹವರ ವಿರುದ್ಧ ಚೆನ್ನಮ್ಮ ಹೋರಾಡಿದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡ ಪರ ಹೋರಾಟಗಾರ ಮೂಗುರು ನಂಜುಂಡಸ್ವಾಮಿ, ಯಮುನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net