

ಎಚ್.ಡಿ.ಕೋಟೆ: ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಘದ ತಾಲೂಕು ಶಾಖೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೇರಿದ ನೌಕರರು, ಯಾವುದೇ ಫಲಾಪೇಕ್ಷೆ ಇಲ್ಲದೆ ನೌಕರರ ಹಿತ ರಕ್ಷಣೆಗಾಗಿ ಹಾಗೂ ಸಂಘದ ಶ್ರೇಯೋಭಿವೃದ್ಧಿಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಹಗಲು ರಾತ್ರಿ ಏಳ್ಗೆಗಾಗಿ ಶ್ರಮಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಎಲ್ಲ ಹಂತದ ಪದಾಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಸಂಘಕ್ಕೆ ಆಡಳಿತ ಅಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಆಧಾರ ರಹಿತ ಸುಳ್ಳು ದೂರು ನೀಡಿ ಸಂಘದ ವಿರುದ್ಧ ತೇಜೋವಧೆ ಮಾಡಿರುವ ಶಾಂತರಾಮ, ಗುರುಸ್ವಾಮಿ, ಎಂ.ಮೆಹಬೂಬ್ ಭಾಷ, ಶಿವರುದ್ರಯ್ಯ ಹಾಗೂ ನಿಂಗೇಗೌಡ್ರುವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಸ್.ಮಹದೇವು ಮಾತನಾಡಿ, 2019-24ನೇ ಸಾಲಿಗೆ ರಾಜ್ಯ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಆಯ್ಕೆಯಾದ ನಂತರ ನೌಕರರ ಸ್ನೇಹಿ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ . ಇಂಥ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷರು ಹಾಗೂ ಸಂಘಟನೆ ವಿರುದ್ಧ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುತ್ತಿರುವುದು ನೌಕರರಿಗೆ ನೋವು ಮಾಡಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಸಣ್ಣರಾಮಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಸೋಮಸುಂದರ್, ಖಜಾಂಚಿ ಸೋಮಶೇಖರ್, ಗಿರೀಶ್ ಮೂರ್ತಿ, ಮಹದೇವ, ಜಿ.ಸುರೇಶ್, ಮಂಜುನಾಥ್ ಬಿ ಎಸ್, ಭೀಮಪ್ಪ, ಪ್ರಶಾಂತ್, ಸರಳಾ, ಜುನೈದ್ ಇದ್ದರು.