ಕಾಶಿಲಿಂಗೇಶ್ವರ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ

ತರಿಕಲ್ಲು ಗ್ರಾಮದ ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ದೀಪ ಬೆಳಗಿ ಚಾಲನೆ ನೀಡಿದರು.
08dhmp2
Published on

ಧರ್ಮಾಪುರ: ಇಲ್ಲಿನ ಗ್ರಾಪಂ ವ್ಯಾಪ್ತಿಯ ತರಿಕಲ್ಲು ಗ್ರಾಮದ ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ದೀಪ ಬೆಳಗಿ ಚಾಲನೆ ನೀಡಿದರು.


ನಂತರ ಮಾತನಾಡಿದ ಅವರು, ಈ ಹಿಂದೆ ಕಾಶಿಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದರೆ ಇಂದಿನ ಬಿಜೆಪಿ ನೇತೃತ್ವದ ಸರ್ಕಾರ ಅನುದಾನದ ಹಣ ಬಿಡುಗಡೆ ಮಾಡದ ಪರಿಣಾಮ ದೇವಸ್ಥಾನ ಕೆಲಸಕ್ಕೆ ತೊಡಕಾಗಿದೆ. ಶೀಘ್ರವೇ ದೇವಸ್ಥಾನದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.


ದೇಗುಲ ಮುಂಭಾಗ ದೀಪದಾರತಿ: ದೇವಾಲಯಕ್ಕೆ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕೆಲವರು ದೇವಾಲಯದ ಸುತ್ತ ದೀಪ ಹಚ್ಚಿದರೆ, ಇನ್ನೂ ಕೆಲವರು ದೇವಾಲಯದ ಮುಂಭಾಗ ದೀಪದಾರತಿ ಮಾಡಿ ಭಕ್ತಿ ಮೆರೆದರು.


ಅನ್ನ ಸಂತರ್ಪಣೆ: ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ಮೂರನೇ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ದೇವಾಲಯದ ಆವರಣದಲ್ಲಿ ಮಲ್ಲೆಗೌಡನಕೊಪ್ಪಲು ಉದ್ಯಮಿ ಕೃಷ್ಣ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಭಕ್ತರು ಸರತಿ ಯಲ್ಲಿ ಸಾಗಿ ಪ್ರಸಾದ ಸ್ವೀಕರಿಸಿದರು.


ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಗ್ರಾಪಂ ಸದಸ್ಯರಾದ ಹೇಮಾವತಿ ನಾಗರಾಜ್, ನಾಗರಾಜ್, ಜಯಪ್ರಕಾಶ್, ವಿಜೇಂದ್ರಕುಮಾರ್, ಮಹದೇವ್, ಮಾಜಿ ಸದಸ್ಯರಾದ ಶೇಖರ್, ಸುಂದರ್‌ರಾಜ್, ಉದ್ಯಮಿಗಳಾದ ದಿನೇಶ್, ಮುರುಗೇಶ್, ಮುಖಂಡರಾದ ರಾಜು, ಅಜ್ಗರ್‌ಪಾಷ, ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net