

ಕಾವ್ಯದ ಮೂಲಕ ಸಮಾಜಕ್ಕೆ ಉಪಯುಕ್ತ ಸಂದೇಶವನ್ನು ನೀಡಬಹುದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೇವರತ್ನ ಫೌಂಡೇಷನ್, ಲಯನ್ಸ್ ಕ್ಲಬ್ ಅಂಬಾಸಿಡರ್ಸ್, ಭೂಮಿಗಿರಿ ಪ್ರಕಾಶನ ವತಿಯಿಂದ ವಿಜಯಗರ ಸಾಹಿತ್ಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಯಶಿಕ ಅವರ ವಸಂತ ಕಾವ್ಯ-ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾವ್ಯ ಸಂಘರ್ಷಕ್ಕೆ ಕಾರಣವಾಗಬಾರದು, ಬದಲಿಗೆ ಪರಿವರ್ತನೆಗೆ ಕಾರಣವಾಗಬೇಕು. ಪ್ರಸ್ತುತ ಸಂಕ್ರಮಣ ಪರಿಸ್ಥಿತಿ ಇಲ್ಲ. ಪರಸ್ಪರ ಆಕ್ರಮಣ ಪರಿಸ್ಥಿತಿ ಕಂಡು ಬರುತ್ತಿದೆ ಎಂದು ವಿಷಾದಿಸಿದರು.
ಕಾವ್ಯ ಸಾಮಾನ್ಯವಾದುದಲ್ಲ. ದಿವ್ಯವಾದುದು. ಅಮೃತವಾದುದು. ಕಾವ್ಯ ಅಲೌಕಿಕವಾದುದಲ್ಲ. ಆ ರೀತಿ ಹೇಳಿದರೆ ಋಣಾತ್ಮಕವಾಗುತ್ತದೆ. ಕಾವ್ಯ ಲೋಕೋತ್ತರವಾದುದು. ಕಾವ್ಯ ಲೋಕದ ಸಂಬಂಧ ಇಟ್ಟುಕೊಂಡೆ ಲೋಕ ಕಟ್ಟಿಕೊಡುವ ಲೋಕೋತ್ತರ ಕೆಲಸ ಮಾಡುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಸಣ್ಣ ಸಣ್ಣ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವ್ಯ ಆತ್ಮಹತ್ಯೆಗೆ ದಾರಿಯಾಗಬಾರದು. ಆತ್ಮಾವಲೋಕನ ಮಾಡಿಸುವಂತಿರಬೇಕು. ಕಾವ್ಯ ಎಂದರೆ ಹಿಗ್ಗು, ಕಾವ್ಯ ಎಂದರೆ ಸಂಭ್ರಮ. ಕಾವ್ಯ ಎಂದರೆ ಮಾನವೀಯತೆಯಿಂದ ಕೂಡಿರಬೇಕು. ಮನನೀಯವೂ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.
ಯಶಿಕ ಅವರ ಕಾವ್ಯಲೋಕದ ಬೆಳಕಿನ ಬಾಗಿಲನ್ನು ತೆರೆದಿದ್ದೇನೆ. ಇಲ್ಲಿರುವ ಕವನಗಳು ವಿಶಿಷ್ಟವೂ ಹೌದು, ಯಶಿಕ ಬರೆದಿರುವುದರಿಂದ ಯಶಿಷ್ಟವೂ ಹೌದು. ಗದ್ಯ- ಪದ್ಯ ಎರಡೂ ಇರುವುದರಿಂದ ಇದೊಂದು ರೀತಿಯಲ್ಲಿ ಚಂಪೂಕಾವ್ಯ ಇದ್ದಂತೆ ಎಂದು ಬಣ್ಣಿಸಿದರು.
ವಸಂತ ಕಾವ್ಯ-ಕವನ ಸಂಕಲನ ಬಿಡುಗಡೆ ಮಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಓದಿದಾಗ ಮನಸ್ಸಿಗೆ ಉಲ್ಲಾಸ ತರುವುದೇ ಕಾವ್ಯ. ಯಶಿಕ ಅವರು ಸರಳ, ಸುಂದರ ಶೈಲಿಯಲ್ಲಿ ನವನವೀನವಾಗಿ, ವಾಸ್ತವಿಕ ನೆಲೆಗಟ್ಟಿನ ಮೇಲೆ ಕವನಗಳನ್ನು ರಚಿಸಿದ್ದಾರೆ ಎಂದು ಶ್ಲಾಘಿಸಿದರು.
ಕೃತಿ ಕುರಿತು ಸ್ಪಂದನ ಸಾಂಸ್ಕೃತಿಕ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕವನಗಳು ಸರಳವಾಗಿದ್ದರೆ ಹಗುರ ಎನಿಸಿಬಿಡುತ್ತವೆ. ಸಂಕೀರ್ಣವಾಗಿದ್ದರೆ ಸಾಮಾನ್ಯ ಓದುಗರನ್ನು ತಲುಪುವುದು ಕಷ್ಟ. ಯಶಿಕ ಅವರ ಕವನಗಳು ಹೊಸತನ ಹಾಗೂ ಲವಲವಿಕೆಯಿಂದ ಕೂಡಿವೆ. ವಾಸ್ತವಿಕ ಘಟನೆಗಳೇ ಕಾವ್ಯದ ವಸ್ತುವಾಗಿವೆ. ಇದೊಂದು ರೀತಿಯಲ್ಲಿ ಗಪದ್ಯ. ಪದ್ಯದ ಜತೆಗೆ ಗದ್ಯವೂ ಉಂಟು, ಕಲ್ಪನಾಲಹರಿಗಿಂತ ವಾಸ್ತವಿಕ ಎದ್ದು ಕಾಣಿಸುತ್ತದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದೇವರತ್ನ ಫೌಂಡೇಷನ್ ಸಂಸ್ಥಾಪಕ ಎಂ.ಶಿವಪ್ರಸಾದ್ ಮಾತನಾಡಿದರು. ಎಲ್‌ಸಿಎಂಎ ಜಿಲ್ಲಾ ಜಿಎಲ್‌ಟಿ ಸಂಯೋಜಕ ಟಿ.ಎಚ್. ವೆಂಕಟೇಶ್, ಲಯನ್ಸ್ ಕ್ಲಬ್ ಅಂಬಾಸಿಡರ್ಸ್ ಅಧ್ಯಕ್ಷ ವಿ. ಶ್ರೀಧರ್, ಕವಯತ್ರಿ ಯಶಿಕ, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಮ.ನ. ಲತಾ ಮೋಹನ್, ಭೂಮಿಗಿರಿ ಪ್ರಕಾಶನದ ಎನ್. ಬೆಟ್ಟೇಗೌಡ ಇತರರಿದ್ದರು.