ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ : ಮೂವರು ಆರೋಪಿಗಳ ಬಂಧನ

remdesivir_bottle
Published on

ವಿಜಯಪುರ : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೆಮ್‌ಡಿಸಿವಿರ್ ಔಷಧವನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಕೇಶ ಹಣಮಂತ ಹಲಗಣಿ, ರೂಪಾಲಿ ರಾಕೇಶ ಹಲಗಣಿ ಹಾಗೂ ಶೋಭಾ ಭೀಮಣ್ಣ ತಳವಾರ ಬಂಧಿತರು. ರೂಪಾಲಿ ಹಾಗೂ ಶೋಭಾ ಇಬ್ಬರು ಧನ್ವಂತರಿ ಆಸ್ಪತ್ರೆ ಸ್ಟಾಪ್ ನರ್ಸ್ ಎಂದು ತಿಳಿದುಬಂದಿದೆ. ಹಣ ಸಂಪಾದನೆ ಮಾಡುವ ಉದ್ದೇಶದಿಂದ ಶನಿವಾರ ಬೆಳಗ್ಗೆ 10.30 ಗಂಟೆ ವೇಳೆಗೆ ದಾತ್ರಿ ಮಸೀದಿ ಸಮೀಪ ರೆಮ್‌ಡಿಸಿವಿರ್ ಔಷಧ ಒಂದು ವೈಲ್‌ಗೆ 22 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಔದ್ರಾಮ್, ಗಾಂಧಿಚೌಕ್ ಠಾಣೆ ಪಿಎಸ್‌ಐ ರವೀಂದ್ರ ನಾಯ್ಕೋಡಿ, ಶರಣಗೌಡ ಬಿ.ಗೌಡರ, ಸಿಬ್ಬಂದಿಗಳಾದ ಎಸ್.ವಿ.ಜೋಗಿನ, ಬಿ.ಕೆ.ಗುಡಿಮನಿ, ಆರ್.ಬಿ.ಬಿರಾದಾರ ದಾಳಿಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net