ಕಾಲ್ತುಳಿತ ಮರೆಮಾಚಲು ಮರು ಜಾತಿಗಣತಿ

Pressmeet
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣವನ್ನು ಮರೆಮಾಚಲು ರಾಜ್ಯದಲ್ಲಿ ಮರು ಜಾತಿಗಣತಿ ನಡೆಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲ್ತುಳಿತ ಪ್ರಕರಣ ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ರಾಜೀನಾಮೆ ಪಡೆಯಲಿದೆ ಅಂದುಕೊಂಡಿದ್ದೆವು. ಆದರೆ, ಮರು ಜಾತಿಗಣತಿಯ ಉಪಾಯ ಹೇಳಿಕೊಟ್ಟು ನಿರ್ಜೀವ ಎಂಬುದನ್ನು ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.

ಕಾಲ್ತುಳಿತಕ್ಕೆ ಸರ್ಕಾರವೇ ನೇರ ಕಾರಣ. ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ಇಬ್ಬರೂ ರಾಜೀನಾಮೆ ನೀಡಬೇಕಿತ್ತು. ಆದರೆ, ಲೂಟಿ ಮಾಡುವ ಕಾರಣಕ್ಕೆ ನೀಡುತ್ತಿಲ್ಲ. ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ನಿಲ್ಲದು ಎಂದರು.

ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಪಕ್ಷದ ಜಿಲ್ಲಾಧ್ಯಕ್ಷ ಎ. ಮುರಳಿ, ನಿಯೋಜಿತ ನೂತನ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net