ಕಾಲುಬಾಯಿ ರೋಗ ಉಲ್ಬಣ: ಗ್ರಾಮಗಳ ರಾಸುಗಳನ್ನು ಬಾಧಿಸುತ್ತಿದೆ ಸೋಂಕು ಹೈನುಗಾರರಲ್ಲಿ ಆತಂಕ

17-cpt-1p
Published on

ಚನ್ನಪಟ್ಟಣ : ತಾಲೂಕಿನ ಹಲವು ಗ್ರಾಮಗಳ ರಾಸುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಳ್ಳುತ್ತಿರುವುದು ರೈತರನ್ನು ಆತಂಕಕ್ಕೀಡುವಾಡಿದೆ.

ಕಾಲುಬಾಯಿ ಜ್ವರ ಅಥವಾ ಗೆರೆಸಲು ಎನ್ನುವುದು ವೈರಾಣುವಿನಿಂದ ಬರುವ ಅಂಟುಜಾಡ್ಯವಾಗಿದ್ದು, ದನ, ಎಮ್ಮೆ, ಕುರಿ, ಮೇಕೆ ಮತ್ತು ಕಾಡು ಪ್ರಾಣಿಗಳಲ್ಲೂ ಈ ರೋಗ ಕಂಡು ಬರುತ್ತದೆ. ತಾಲೂಕಿನ ಬೇವೂರು, ಕೆಲಗೆರೆ, ದೊಡ್ಡನಹಳ್ಳಿ, ಸಿಂಗರಾಜಿಪುರ, ಪೀಹಳ್ಳಿದೊಡ್ಡಿ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಗ ಉಲ್ಬಣಿಸಿದೆ.

ರೋಗದ ಲಕ್ಷಣಗಳೇನು?: ರೋಗಪೀಡಿತ ರಾಸುಗಳಲ್ಲಿ ಅತಿಯಾದ ಜ್ವರ, ಬಾಯಿಯ ವಸಡು, ನಾಲಿಗೆ ಮೇಲೆ ಚಿಕ್ಕ ನೀರ್ಗುಳ್ಳೆಗಳಾಗಿ, ಕ್ರಮೇಣ ಈ ಗುಳ್ಳೆಗಳು ಒಡೆದು, ಜೊಲ್ಲು ಸುರಿಯುವುದು, ತೀವ್ರತೆ ಹೆಚ್ಚಾಗಿದ್ದಲ್ಲಿ ನಾಲಿಗೆಯ ಮೇಲಿನ ಹುಣ್ಣುಗಳಿಂದಾಗಿ, ನಾಲಿಗೆಯ ಹೊರಪದರ ಕಿತ್ತು ಬರುತ್ತದೆ. ಗೊರಸಿನ ಮಧ್ಯೆ ಹುಣ್ಣುಗಳಾಗಿ ಕುಂಟುವುದು, ಕೆಚ್ಚಲಿನ ಮೇಲೆ ನೀರ್ಗುಳ್ಳೆಗಳಾಗಿ ಹಾಲು ಕರೆಯಲು ಸಾಧ್ಯವಿಲ್ಲದಂತಾಗುತ್ತದೆ. ಜ್ವರದ ತೀವ್ರತೆ ಹೆಚ್ಚಾಗಿದ್ದಲ್ಲಿ ತುಂಬು ಗರ್ಭದ ರಾಸುಗಳಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಂಟು ರೋಗ: ಗ್ರಾಮದ ಒಂದು ರಾಸುವಿಗೆ ರೋಗ ಕಂಡುಬಂದರೆ, ಇತರ ರಾಸುಗಳಿಗೂ ಹರಡುವುದರಲ್ಲಿ ಸಂಶಯವಿಲ್ಲ. ರೋಗಗ್ರಸ್ಥ ಪ್ರಾಣಿಗಳ ಜೊಲ್ಲು, ಹಾಲು, ಗಂಜಲ, ವೀರ್ಯ, ಸಗಣಿ, ಮೂಗಿನಿಂದ ಈ ವೈರಾಣುಗಳು ಸುವಾರು 5ರಿಂದ 11 ದಿನಗಳವರೆಗೆ ಹೊರಬರುತ್ತವೆ. ಕೊಟ್ಟಿಗೆಯಲ್ಲಿ ನಿಂತ ಗಂಜಲದಲ್ಲಿ ಸುವಾರು ಒಂದು ತಿಂಗಳು ಹಾಗೂ ಒಣ ರಾಡಿಯಲ್ಲಿ 14 ದಿನಗಳು ಸೇರಿ ಸುವಾರು 6 ತಿಂಗಳು ಈ ವೈರಾಣು ಜೀವಂತವಾಗಿರುತ್ತದೆ. ಕಲುಷಿತ ನೀರು, ಮೇವು ಮತ್ತು ಗಾಳಿಯ ಮೂಲಕ ಬೇರೆ ರಾಸುಗಳಿಗೆ ಸುಲಭವಾಗಿ ಈ ರೋಗ ಹರಡುತ್ತದೆ. ಈ ಲಕ್ಷಣಗಳ ಮೂಲಕ ರೈತರೇ ರೋಗ ಪತ್ತೆ ಹಚ್ಚಬಹುದಾಗಿದೆ.

ಏನು ಮಾಡಬೇಕು?: ರೋಗಪೀಡಿತ ರಾಸುಗಳ ಬಾಯಿ, ಕಾಲುಗಳ ಹುಣ್ಣುಗಳನ್ನು ದಿನಕ್ಕೆ ಎರಡು ಬಾರಿ ಒಂದು ಲೀಟರ್ ನೀರಿಗೆ ಶೇ. 0.5ರಷ್ಟು ಅಡುಗೆ ಸೋಡಾ ಬೆರೆಸಿ ಸ್ವಚ್ಛಗೊಳಿಸಬೇಕು. ಬಾಯಿಯ ಒಳಭಾಗದ ಹುಣ್ಣುಗಳಿಗೆ ಜೇನುತುಪ್ಪ ಲೇಪಿಸಬೇಕು. ಗೊರಸು ಅಥವಾ ಕೆಚ್ಚಲು ಹುಣ್ಣುಗಳ ಮೇಲೆ ನೊಣ ಕೂರದಂತೆ ಬೇವಿನಎಣ್ಣೆ ಮತ್ತು ಮುಲಾಮು ಹಚ್ಚಬೇಕು. ಕೊಟ್ಟಿಗೆ, ಶೆಡ್ಡುಗಳಿಗೆ ವಾಷಿಂಗ್ ಸೋಡಾ ದ್ರಾವಣ ಇಲ್ಲವೆ, ಇತರ ಅಂಟುಜಾಡ್ಯ ನಿವಾರಕಗಳನ್ನು ಸಿಂಪಡಿಸಬೇಕು. ರೋಗಗ್ರಸ್ತ ಪ್ರಾಣಿಗಳು ಮೇವು ತಿನ್ನಲು ಆಗುವುದಿಲ್ಲ. ಈ ಕಾರಣದಿಂದಾಗಿ ಮೃದು ಆಹಾರಗಳಾದ, ಗಂಜಿ, ಬಾಳೆಹಣ್ಣು, ರಸಭರಿತ ಹಸಿರು ಹುಲ್ಲು ನೀಡಬೇಕು ಎನ್ನುವುದು ಪಶು ವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿ ಅವರ ಸಲಹೆಯಾಗಿದೆ.

ರಿಂಗ್ ವ್ಯಾಕ್ಸಿನೇಷನ್ ಆಗುತ್ತಿಲ್ಲ : ರೋಗ ನಿವಾರಣೆ ಹಾಗೂ ಹತೋಟಿಗೆ ಈ ಹಿಂದೆ ರೋಗ ಕಾಣಿಸಿಕೊಂಡ ಗ್ರಾಮಗಳ ಸುತ್ತಮುತ್ತಲ 10 ಕಿಮೀ ವ್ಯಾಪ್ತಿಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ರಿಂಗ್ ವ್ಯಾಕ್ಸಿನ್ ವಾಡಲಾಗುತ್ತಿತ್ತು. ಗ್ರಾಮಗಳ ಪ್ರತಿ ರಾಸುಗಳಿಗೂ ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡಿ ಎಚ್ಚರಿಕೆ ವಹಿಸಲಾಗುತ್ತಿತ್ತು. ಆದರೆ, ಈ ಬಾರಿ ಲಸಿಕೆ ಇಲ್ಲದಿರುವ ಕಾರಣ, ಈ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ಇದು ರೈತರನ್ನು ಆತಂಕಕ್ಕೀಡುಮಾಡಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಎಂಪಿಸಿಎಸ್ ವತಿಯಿಂದಲೇ ರಾಸು ಅಭಿವೃದ್ಧಿ ನಿಧಿ ಬಳಸಿಕೊಂಡು ಲಸಿಕೆ ನೀಡುವ ಕೆಲಸ ಆರಂಭಿಸಲಾಗಿದೆ. ಬಮುಲ್ ಅಧಿಕಾರಿಗಳೂ ಸಹ ರೋಗ ಉಲ್ಬಣಗೊಂಡಿರುವ ರಾಸುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿದ್ದಾರೆ. ಆದರೆ, ರಿಂಗ್ ವ್ಯಾಕ್ಸಿನ್ ಕಾರ್ಯಕ್ರಮ ಆರಂಭಿಸಬೇಕು ಎನ್ನುವುದು ಬೇವೂರು ಗ್ರಾಮದ ರೈತ ಬಿ.ಸಿ.ರಾವೇಂದ್ರ ಎಂಬುವವರ ಆಗ್ರಹವಾಗಿದೆ.

ತಾಲೂಕಿನ ಕೆಲ ಗ್ರಾಮಗಳ ರಾಸುಗಳಲ್ಲಿ ರೋಗ ಲಕ್ಷಣ ಕಂಡುಬಂದಿದೆ. ಈಗಾಗಲೇ ರೋಗಪೀಡಿತ ರಾಸುಗಳಿಗೆ ಚಿಕಿತ್ಸೆ, ಹತೋಟಿಗೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ರೋಗ ಕಂಡು ಬಂದಿರುವ ಹಾಗೂ ಅಕ್ಕಪಕ್ಕದ ಗ್ರಾಮಗಳ ಎಂಪಿಸಿಎಸ್ ವತಿಯಿಂದ ರಾಸು ಅಭಿವೃದ್ಧಿ ನಿಧಿ ಬಳಸಿಕೊಂಡು ಲಸಿಕೆ ಹಾಕಿಸುತ್ತಿದ್ದಾರೆ. ರೋಗ ನಿಯಂತ್ರಣಕ್ಕೆ ಒಕ್ಕೂಟ ಶ್ರಮಿಸಲಿದೆ. ಆತಂಕಪಡುವ ಅವಶ್ಯಕತೆ ಇಲ್ಲ. ಡಾ.ವೈ.ಎಚ್. ಹೇಮಂತ್ ಬಮುಲ್ ಶಿಬಿರ ಉಪವ್ಯವಸ್ಥಾಪಕ, ಚನ್ನಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net