ಕಾರ್ಯಾಂಗ ಜವಾಬ್ದಾರಿ ಕಳೆದುಕೊಂಡಿದೆ

h31-Samutkarsh 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕಾರ್ಯಾಂಗವು ನಿರೀಕ್ಷೆಗೂ ಮೀರಿ ತನ್ನ ಜವಾಬ್ದಾರಿಯನ್ನು ಕಳೆದುಕೊಂಡಿದೆ. ಬ್ರಿಟಿಷ್​ರ ಗುಲಾಮಿತನದ ಮಾನಸಿಕತೆಯ ಪರಿಣಾಮ ಇದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು.

ಸಮುತ್ಕರ್ಷ ಟ್ರಸ್ಟ್ ವತಿಯಿಂದ ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮುತ್ಕರ್ಷ ಐಎಎಸ್ ಅಕಾಡೆಮಿಯ 2022ನೇ ಬ್ಯಾಚ್​ನ ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಡಳಿತ ಯಂತ್ರವನ್ನು ಜಟಿಲಗೊಳಿಸುವ, ಕೊಕ್ಕೆ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಒಂದು ಕಡತವು 125 ಹಂತಗಳನ್ನು ಮೀರಿ ನಮ್ಮ ಕೈ ಸೇರುತ್ತದೆ. ನಂತರ ಅದು ಜನರಿಗೆ ತಲುಪಲು 125 ಹಂತ ಕೆಳಗಿಳಿಯಬೇಕು. 2014ರಲ್ಲಿ ಇ-ವಿಧಾನ ಜಾರಿಗೆ ತರಬೇಕೆಂದು ಎಲ್ಲರೂ ಒತ್ತಾಯಿಸುತ್ತಿದ್ದೇವೆ. ಇದುವರೆಗೂ ಜಾರಿಯಾಗುತ್ತಿಲ್ಲ. ನಮ್ಮದು ಐಟಿ-ಬಿಟಿ, ಸಿಲಿಕಾನ್ ವ್ಯಾಲಿ ರಾಜಧಾನಿ ಆದರೂ ಜಾರಿ ವಿಳಂಬವೇಕೆ? ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಅರ್​ಎಸ್​ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಕನಸಿನ ಜತೆಗೆ ಸಂಕಲ್ಪ ಮಾಡಬೇಕು. ಅಂದಾಗ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಸತತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಮುತ್ಕರ್ಷ ಟ್ರಸ್ಟ್ ಅಧ್ಯಕ್ಷ ಡಾ. ವಿಜಯಭಾಸ್ಕರ ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್​ನ ಡೈರೆಕ್ಟರ್ ಜನರಲ್ ಜಿತೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಲ ಅಭ್ಯರ್ಥಿಗಳು ಮತ್ತು ಪಾಲಕರು ಅನಿಸಿಕೆ ವ್ಯಕ್ತಪಡಿಸಿದರು. ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕಾರಿ ಮಂಡಳಿ ಸದಸ್ಯರಾದ ಅಚ್ಯುತ ಲಿಮಯೆ, ಶಿವಾನಂದ ಆವಟಿ, ಡಾ. ಶ್ರೀನಿವಾಸ ಪಾಟೀಲ, ಎಂ.ಆರ್. ಪಾಟೀಲ, ದತ್ತಾತ್ರೇಯ ಜಿ. ಇತರರು ಇದ್ದರು.

ಕಾಯನಿರ್ವಾಹಕ ನಿರ್ದೇಶಕ ವಿಶಾಲ ಸಂಗಣ್ಣವರ ನಿರೂಪಿಸಿದರು. ಸಂತೋಷ ಕೆಲೊಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net