ಕಾರ್ಯಕರ್ತರೇ ಪಕ್ಷದ ಆಸ್ತಿ

27sri-1 congres
ಶೃಂಗೇರಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಕೆ.ಸಿ.ವೆಂಕಟೇಶ್,ಶಿವಮೂರ್ತಿ, ಭಾಸ್ಕರ್ ನಾಯ್ಕ, ದಿನೇಶ್ ಹೆಗ್ಡೆ ಇದ್ದರು
Published on

ಶೃಂಗೇರಿ: ಕಾರ್ಯಕರ್ತರೇ ಪಕ್ಷದ ಆಸ್ತಿ. ಚುನಾವಣಾ ಸಂದರ್ಭದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಪಕ್ಷದ ಗೌರವ ದೊರಕಿಸಿಕೊಡುವುದು ಜನಪ್ರತಿನಿಧಿಗಳ ಕರ್ತವ್ಯ ಆಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ವಿದ್ಯಾನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಸಹಕಾರ ಸಂಘ ಹಾಗೂ ಕೃಷಿಕ ಸಮಾಜಕ್ಕೆ ಆಯ್ಕೆಯಾದ ಪಕ್ಷದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕರ್ತರ ನಿರೀಕ್ಷೆಯನ್ನು ಒಂದೇ ಬಾರಿಗೆ ಈಡೇರಿಸಲು ಆಗುವುದಿಲ್ಲ. ಸರ್ಕಾರದ ವಿವಿಧ ನಾಮನಿರ್ದೇಶನಕ್ಕೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಪರಿಗಣಿಸಲಾಗುತ್ತದೆ. ಮುಂಬರುವ ತಾಲೂಕು ಮತ್ತು ಜಿಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಈಗಿನಿಂದ ತಯಾರಿ ನಡೆಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಸಹಕಾರಿ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ನಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಚುನಾವಣೆಯಲ್ಲಿ ಭಿನ್ನಾಭಿಪ್ರಾಯ ಮರೆತು ಪಕ್ಷಕ್ಕಾಗಿ ದುಡಿಯಬೇಕು. ಪಕ್ಷದಲ್ಲಿ ಎಲ್ಲರೂ ಸಮಾನರು. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕಾಗಿದ್ದು ಕಾರ್ಯಕರ್ತರ ಸಮಸ್ಯೆಗೆ ಮುಖಂಡರು ಸ್ಪಂದಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಹಕಾರ ಸಂಘದಲ್ಲಿ ಹಾಗೂ ಕೃಷಿಕ ಸಮಾಜಕ್ಕೆ ಚುನಾಯಿತರಾದ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್, ಮುಖಂಡರಾದ ಕಾನುವಳ್ಳಿ ಕೃಷ್ಣಪ್ಪಗೌಡ, ಸೌಭಾಗ್ಯಾ ಗೋಪಾಲನ್, ವೆಂಕಟೇಶ್, ಗೋಪಾಲನಾಯ್ಕ, ರಮೇಶ್ ಭಟ್ ಮಹಾಬಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net