ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಬೇಡಿ

RV Deshpande
Published on

ಹಳಿಯಾಳ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಹೀಗಿರುವಾಗ ಹಳಿಯಾಳ ಕ್ಷೇತ್ರದಲ್ಲಿ ಕೆಲವರು ತಾವೇ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿಯಾಳ ಕ್ಷೇತ್ರಕ್ಕೆ ನಾನೇ ಪರ್ಮನೆಂಟ್ ಅಭ್ಯರ್ಥಿ ಅಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಬೇಕು ಎಂದು ತೀರ್ವನಿಸುತ್ತದೆ. ಜನಪ್ರತಿನಿಧಿಯಾಗ ಬಯಸುವವರು ಪಕ್ಷದ ಸಿದ್ಧಾಂತ, ಸಂವಿಧಾನ ಸೂಚಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು. ಮನಬಂದಂತೆ ಗೊಂದಲ ಸೃಷ್ಟಿಸುವುದರಿಂದ ಶಾಸಕನಾಗುವುದು ಅಸಾಧ್ಯ. ಇದರಿಂದ ಪಕ್ಷಕ್ಕೆ ಹಾನಿಯಾಗುವುದಲ್ಲದೆ, ಕಾರ್ಯಕರ್ತರಿಗೂ ಪಕ್ಷದ ಮೇಲಿನ ವಿಶ್ವಾಸ ಹೋಗುತ್ತದೆ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ಕೊಳಚೆ ಮಂಡಳಿಯಿಂದ ಹಳಿಯಾಳ ಮತ್ತು ದಾಂಡೇಲಿ ತಾಲೂಕಿಗೆ 2337 ಮನೆಗಳು ಮಂಜೂರಾಗಿದ್ದು, ಅದರಲ್ಲಿ 500 ಮನೆಗಳು ಪೂರ್ಣಗೊಂಡಿವೆ. ಬಾಕಿ ಉಳಿದಿರುವ ಮನೆಗಳ ನಿರ್ವಣಕ್ಕೆ ರಾಜ್ಯ ಸರ್ಕಾರ ಒಡ್ಡಿದ್ದ ತಡೆಯಾಜ್ಞೆ ಹಿಂಪಡೆದಿದೆ. ಹೀಗಾಗಿ ಮನೆಗಳ ನಿರ್ಮಾಣ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದರು. ಜಿಲ್ಲೆಯಲ್ಲಿನ ಹಾಲಕ್ಕಿ ಗೌಡ ಸಮುದಾಯ, ಕುಣಬಿ ಮತ್ತು ಗೌಳಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಪಾರದರ್ಶಕ ತನಿಖೆ ನಡೆಯಲಿದೆಯೆಂಬ ಹೇಳಿಕೆಗೆ ಬದ್ಧ

ಹಳಿಯಾಳ ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಹಾಗೂ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಅವ್ಯವಹಾರ ನಡೆದಿದ್ದು ಮೇಲ್ನೋಟಕ್ಕೆ ಕಂಡು ಬಂದಲ್ಲಿ, ನ್ಯಾಯಬದ್ಧ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಬೇಕೆನ್ನುವ ಹೇಳಿಕೆ ಪುನರುಚ್ಚಿಸುತ್ತಿದ್ದು ಇಂತಹ ತನಿಖೆಗಳಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ನರೇಗಾ ಯೋಜನೆ ಕುರಿತು ಸಚಿವ ಶಿವರಾಮ ಹೆಬ್ಬಾರ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ದೂರದೃಷ್ಟಿತ್ವ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ ಅವರ ಮಹಾತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯು ಬಡವರ್ಗದವರಿಗೆ ನಿಶ್ಚಿತ ಆದಾಯದ ಜೊತೆಗೆ ಉದ್ಯೋಗ ನೀಡಿದೆ. ಇದರಿಂದ ಹಲವಾರು ಕೋಟಿ ಉದ್ಯೋಗ ಸೃಷ್ಟಿಯಾಗಿ, ಬಡವರಿಗೆ ಅನ್ನ ದೊರಕಿದೆ. ಆದರೆ, ಈ ಯೋಜನೆಯ ದುರುಪಯೋಗ ಪಡೆದು ಕೆಲವರು ಅವ್ಯವಹಾರ ನಡೆಸಿರುವುದು ನನ್ನ ಗಮನಕ್ಕೆ ಬಂದಾಗ ಅದನ್ನು ಸಾರ್ವಜನಿಕವಾಗಿ ಹೇಳಿ ಎಚ್ಚರಿಸಿ ಕ್ರಮಕ್ಕೆ ಸೂಚಿಸುವುದು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯವೆಂದು ತಿಳಿದಿದ್ದೇನೆ. ಬಡ ವರ್ಗದವರಿಗಾಗಿ ತಂದ ಯೋಜನೆಯಲ್ಲಿ ಸರ್ಕಾರದ ಅನುದಾನ ಪ್ರತಿಯೊಬ್ಬ ಪ್ರಜೆಯ ಹಣವಾಗಿದ್ದು, ಈ ಹಣವು ಸದ್ಬಳಕೆಯಾಗಬೇಕೆಂಬ ಕಳಕಳಿ ಇದೆ. ವಿನಃ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ವಿಚಾರ ಧಾರೆಯು ನನ್ನಂತೆಯೇ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಹಳಿಯಾಳ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನರೇಗಾ ಕಾಮಗಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ವತಿಯಿಂದ ಅಭಿನಂದಿಸಿ, ಗೌರವಿಸಿ ಪ್ರಶಸ್ತಿ ನೀಡಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net