

ಹುಣಸೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವಿನ ಕಚ್ಚಾಟದಿಂದಾಗಿಯೇ ನನಗೆ ಸೋಲಾಯಿತು ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ನಗರದ ಸಲೀಂ ಪ್ಯಾಲೇಸ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಇದು ಆತ್ಮಾವಲೋಕನ ಸಭೆಯಲ್ಲ. ಬದಲಾಗಿ 92 ಸಾವಿರ ಮತದಾರರಿಗೆ ಕೃತಜ್ಞತೆ ಹೇಳುವ ಸಭೆಯಾಗಿದೆ. ಪಕ್ಷದ ಬೆನ್ನಿಗೆ, ನನಗೆ ಚೂರಿ ಹಾಕಿದವರಿಗಾಗಿ ಈ ಸಭೆಯಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಿ ಈ ಸಭೆ ಆಯೋಜಿಸಲಾಗಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಗೆದ್ದ ನಂತರ ಅಲ್ಲಿ ಫೋಟೋ ತೆಗೆಸಿಕೊಂಡ ಕೆಲವರು ಇಲ್ಲಿಗೂ ಬಂದಿದ್ದಾರೆ. ನಿಯತ್ತಾಗಿ ಕೆಲಸ ಮಾಡಿದವರು ಸಹ ಬಂದಿದ್ದಾರೆ. ಅದೇ ಸಂತೋಷ. ನನ್ನ ಚುನಾವಣಾ ಸಮಯದಲ್ಲಿ ಎಲ್ಲ ಕೊಡುಗೆ ನೀಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಹೊಟ್ಟೆ ನೋವು ಅನುಭವಿಸಿದವರಿಗೆ ಗೊತ್ತು ಆ ನೋವು. ನನಗೆ ಬಂದಿರುವ ನೋವು ತೋಡಿಕೊಳ್ಳುವ ಸಭೆ ಇದು. ನನ್ನ ಸೋಲಿಗೆ ನೂರಾರು ಕಾರಣಗಳಿವೆ. ಸಾವಿರ ಘಟನೆಗಳಿವೆ. ವಿರೋಧಿಗಳಲ್ಲಿ ಗೆಲ್ಲಬೇಕೆನ್ನುವ ಹುಮ್ಮಸ್ಸು ಇತ್ತು. ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ತಾತ್ಸಾರವೂ ನಮ್ಮ ಸೋಲಿಗೆ ಕಾರಣ. ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಜಿ.ಪಂ.ಸದಸ್ಯರು ಕೇವಲ ಒಂದು ವಾರದಲ್ಲಿ ಸೇಲಾಗಿಬಿಟ್ಟರು. ಕೋವಿಡ್‌ನಲ್ಲಿ ನೆರವಾಗಿದ್ದು, ಕೋವಿಡ್ ಸಾವಿನಲ್ಲಿ ಹೆಣಗಳನ್ನು ಹೊತ್ತಿದ್ದು, ಮನೆ ಮನೆಗೆ ಹೋಗಿ ಕಷ್ಟ ಸುಖಗಳನ್ನು ಕೇಳಿದ್ದು, ಕಷ್ಟದಲ್ಲಿದ್ದವರಿಗೆ ಸ್ಪಂದಿಸಿದ್ದು ನನ್ನ ತಪ್ಪು ಎಂದೆನಿಸುತ್ತದೆ ಎಂದು ಆತ್ಮಾವಲೋಕನ ಮಾಡಿಕೊಂಡರು.
ನಾನು ನನ್ನ ಜನರಿಗಾಗಿ ಆಗಬೇಕಾದ ಕೆಲಸ ಮಾಡುವೆ. ನನ್ನ ಅಧಿಕಾರಾವಧಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಉಂಡವಾಡಿ- 2 ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ. ಹುಣಸೂರು ನಗರಕ್ಕೆ 25 ಕೋಟಿ ರೂ. ನಗರೋತ್ಥಾನ ಯೋಜನೆ ಕಾಮಗಾರಿ, ಫುಡ್ ಸ್ಟ್ರೀಟ್, ಆಯರಹಳ್ಳಿ ರಸ್ತೆ, ಮರದೂರು ಎರಡನೇ ಹಂತದ ಏತ ನೀರಾವರಿ ಯೋಜನೆಗಳು ನನ್ನ ಅವಧಿಯಲ್ಲಿ ಮಂಜೂರಾಗಿವೆ ಎಂದು ವಿವರಿಸಿದರು.
ಈ ತಾಲೂಕಿನ ಕಾಂಗ್ರೆಸ್ ನಾಯಕತ್ವಕ್ಕೆ ನನಗಿಂತಲೂ ಉತ್ತಮರು ಸಿಕ್ಕಲ್ಲಿ ಮುಂದೆ ಬನ್ನಿ. ನಾನು ತಾಲೂಕಿನ ನಾಯಕತ್ವವನ್ನು ಬಿಟ್ಟು ಕೊಡಲು ಸಿದ್ಧನಿದ್ದೇನೆ. ನಾನು ನೊಗ ಎಳೆಯುತ್ತೇನೆ. ಮುಂದೆ ಬಂದಲ್ಲಿ ಬಂಡಿ ತಳ್ಳಲು ಸಿದ್ಧನಿದ್ದೇನೆ. ಉಳಿದ 2.5 ವರ್ಷದ ಅಧಿಕಾರಕ್ಕೆ ಕಚ್ಚಾಡಬೇಡಿ. ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಡಿ.ಕೆ.ಕುನ್ನೆಗೌಡ, ಹರಿಹರಾ ಆನಂದಸ್ವಾಮಿ, ಎಸ್.ಜಯರಾಮ್, ಹಂದನಹಳ್ಳಿ ಸೋಮಶೇಖರ್, ವಳ್ಳಿಯಮ್ಮ, ವಕೀಲ ಪುಟ್ಟರಾಜ್, ರಮೇಶ್, ಟಿ.ವಿ.ನಾರಾಯಣ್, ಬಸವರಾಜಪ್ಪ, ಬಿ.ಎನ್.ಜಯರಾಮ್, ರಾಜು ಶಿವರಾಜೇಗೌಡ, ಕೃಷ್ಣ, ಬಿಳಿಕೆರೆ ಬಸವರಾಜ್, ಕುಮಾರ್, ರಾಘು, ನಗರಸಭಾ ಸದಸ್ಯರು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಇತರರು ಭಾಗವಹಿಸಿದ್ದರು.