ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

09NGD1
Published on

ನಂಜನಗೂಡು: ತಾಲೂಕಿನ ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ಸ್‌ ಕಾರ್ಖಾನೆಯಲ್ಲಿ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಕಾರ್ಮಿಕ ಸಂಘದಿಂದ ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ. ಕಾರ್ಖಾನೆಯ ಮುಂಭಾಗದಲ್ಲಿ ಸಮಾವೇಶಗೊಂಡಿರುವ ಕಾರ್ಮಿಕರು ತಮಗೆ ಸಿಗಬೇಕಾದ ನ್ಯಾಯಯುತ ವೇತನ ದೊರಕುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.


ಬಣ್ಣಾರಿ ಅಮ್ಮನ್ ಶುಗರ್ಸ್‌ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥಯ್ಯ ಮಾತನಾಡಿ, ರಾಜ್ಯದಲ್ಲಿ 84 ಸಕ್ಕರೆ ಕಾರ್ಖಾನೆಗಳಿದ್ದು ನಾಲ್ಕು ವರ್ಷಕ್ಕೊಮ್ಮೆ ಸರ್ಕಾರವೇ ಕಾರ್ಮಿಕರ ವೇತನ ಪರಿಷ್ಕರಣೆ ಮಾಡುವಂತೆ ಕಾರ್ಖಾನೆಗಳಿಗೆ ನಿರ್ದೇಶನ ನೀಡುತ್ತದೆ. ಅಂತೆಯೇ, ಶೇ.13.5ರಷ್ಟು ವೇತನ ಹೆಚ್ಚಳ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದರೂ ಬಣ್ಣಾರಿ ಅಮ್ಮನ್ ಕಾರ್ಖಾನೆಯಲ್ಲಿ ವೇತನ ಪರಿಷ್ಕರಿಸದೆ ವಿಳಂಬ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲ ಕಾರ್ಖಾನೆಗಳಲ್ಲೂ ಕಾರ್ಮಿಕ ಸಂಬಳ ಹೆಚ್ಚಿಸಲಾಗಿದೆ. ಆದರೆ, ನಮ್ಮ ಕಾರ್ಖಾನೆಯ ಆಡಳಿತ ಮಂಡಳಿ ಮಾತ್ರ ಮೀನಮೇಷ ಎನಿಸುತ್ತಿದೆ ಎಂದು ಆಪಾದಿಸಿದರು.


ಕಾರ್ಖಾನೆಯಲ್ಲಿ ಒಟ್ಟು 600 ಕಾರ್ಮಿಕರಿದ್ದು ಇಂದಿನಿಂದ ಕೆಲಸ ತ್ಯಜಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ನಮಗೆ ವೇತನ ಪರಿಷ್ಕರಣೆ ಮಾಡುವರೆಗೂ ಹೋರಾಟವನ್ನು ಮುಂದುವರಿಸಲಾಗುವುದು. ಆಡಳಿತ ಮಂಡಳಿ ಮಧ್ಯೆ ಪ್ರವೇಶಿಸಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎ.ಆರ್. ನಾಗನಾಯ್ಕ, ಜಿ.ಆರ್. ಮಹದೇವ, ಎನ್.ಶ್ರೀಕಂಠ, ಪ್ರಧಾನ ಕಾರ್ಯದರ್ಶಿ ಎಂ. ವೀರಭದ್ರಪ್ಪ, ಜಂಟಿ ಕಾರ್ಯದರ್ಶಿಗಳಾದ ಜಗದೀಶ್, ಡಿ.ಆರ್. ಗಿರೀಶ್, ನಾಗರಾಜು, ಖಜಾಂಚಿ ಎಂ.ರಮೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net