ಕಾರ್ಮಿಕರಲ್ಲಿ ಮೂಡಿದ ಮಂದಹಾಸ

24 bdvt2 FACTORY
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
Published on

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮುಂದಿನ 2 ತಿಂಗಳ ಅವಧಿಯಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಇಲ್ಲಿನ ಕಾರ್ಮಿಕ ವಲಯ, ಸ್ಥಳೀಯ ನಾಗರಿಕರು ಹಾಗೂ ಮೈತ್ರಿ ಪಕ್ಷದ ನಾಯಕರ ಬಲ ಹೆಚ್ಚುವಂತೆ ಮಾಡಿದೆ.

ಬಂಡವಾಳ ಹಿಂತೆಗೆತದ ಪ್ರಕ್ರಿಯೆಯಿಂದ ನಲುಗುತ್ತಿದ್ದ ಕಾರ್ಖಾನೆಗೆ ಇದೀಗ ಸುಮಾರು 8ರಿಂದ 10 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಚಿಂತನೆ ಕಾರ್ಖಾನೆಗೆ ಜೀವ ತುಂಬುವ ಕೆಲಸ ಮಾಡುತ್ತಿದೆ. ಇದರಿಂದ ಕಾರ್ಖಾನೆ ಅಭಿವೃದ್ಧಿ ಜತೆಗೆ ಸುಮಾರು 5 ರಿಂದ 10 ಸಾವಿರ ಜನರಿಗೆ ಉದ್ಯೋಗ ಸಿಗುವುದಲ್ಲದೆ, ಕ್ಷೇತ್ರದ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯ ಎಂಬುದು ಬಹುತೇಕ ಮೈತ್ರಿ ಮುಖಂಡರ ಅಭಿಪ್ರಾಯ.

ಭದ್ರಾವತಿ-ಚಿಕ್ಕಜಾಜೂರು ನಡುವೆ ರೈಲು ಸಂಪರ್ಕ ಕಲ್ಪಿಸುವ ಸಲುವಾಗಿ ಮಾರ್ಗ ಸಮೀಕ್ಷೆ ಹಾಗೂ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಡಿಪಿಆರ್ ಸಿದ್ದಗೊಳಿಸುವ ನಿರ್ಧಾರ ಕೇಂದ್ರದ ನಿರ್ಧಾರ ಉತ್ತಮ ಬೆಳವಣಿಗೆಯಾಗಿದೆ. ರೈಲು ಸಂಪರ್ಕ ಯಶಸ್ವಿಯಾದಲ್ಲಿ ಕಾರ್ಖಾನೆಗೆ ರಮಣದುರ್ಗದಿಂದ ಅದಿರು, ಸರಕು ಸಾಗಣೆ ತರುವ ಮಾರ್ಗ ಸುಲಭ ಮತ್ತು ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಕಾರ್ಖಾನೆಗೆ 8 ರಿಂದ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿದರೆ 1660 ಎಕರೆ ವಿಸ್ತೀರ್ಣದಲ್ಲಿ ನೂತನ ಪ್ಲಾಂಟ್ ಅಳವಡಿಕೆ ಮಾಡುವುದರಿಂದ ಸುಮಾರು 2 ದಶಲಕ್ಷ ಟನ್ ಉತ್ಪಾದನೆ ಮಾಡುವ ಸಾಮರ್ಥ್ಯ ಸಿಕ್ಕಂತಾಗುತ್ತದೆ. ಅಲ್ಲದೆ 10 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಬಹುದಾಗಿದೆ ಎಂದು ಕಾರ್ಮಿಕ ವಲಯದಲ್ಲಿ ಲೆಕ್ಕಾಚಾರ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net