ಕಾರ್ಮಿಕ ಸಂಘಟನೆಗಳಿಂದ ಜಾಗೃತಿ ಜಾಥಾ

11NGD1
ಪ್ರಜಾಪ್ರಭುತ್ವ ಸಾಮರಸ್ಯ ಮತ್ತು ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಂಘಟನೆಯಿಂದ ನಂಜನಗೂಡಿನಲ್ಲಿ ಜಾಗೃತಿ ಜಾಥಾ ನಡೆಯಿತು.
Published on

ನಂಜನಗೂಡು: ಪ್ರಜಾಪ್ರಭುತ್ವ ಸಾಮರಸ್ಯ ಮತ್ತು ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆಯಿಂದ 77ನೇ ಸ್ವಾತಂತ್ರೊೃೀತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ದೇಶವ್ಯಾಪಿ ಪ್ರಚಾರಾಂದೋಲನದ ಅಂಗವಾಗಿ ನಂಜನಗೂಡಿನಲ್ಲಿ ಕಾರ್ಮಿಕ ಸಂಘಟನೆಗಳವರು ಜಾಥಾ ನಡೆಸಿದರು.

ನಗರದ ಕೈಗಾರಿಕಾ ಪ್ರದೇಶದಿಂದ ಆರಂಭಗೊಂಡ ಜಾಥಾ ಎಂಜಿಎಸ್ ರಸ್ತೆ ಹಾಗೂ ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿ ಬಳಿಕ ವಿಶ್ವೇಶ್ವರಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಗಮನ ಸೆಳೆಯಲಾಯಿತು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಬೆಲೆ ಏರಿಕೆಯಿಂದಾಗಿ ಶ್ರಮಿಕ ವರ್ಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಜನರು ಆಡಳಿತಾರೂಢ ಸರ್ಕಾರಗಳ ಗುಲಾಮಗಿರಿಯಲ್ಲಿ ಬದುಕಬೇಕಿದೆ. ದೇಶದಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಸಮಸ್ಯೆಯಿದ್ದು, ಈಗಲೂ ಹಸಿವು ಹಾಗೂ ಅಪೌಷ್ಟಿಕತೆದಿಂದ ಜನರು ಸಾಯುತ್ತಿದ್ದಾರೆ. ಹೀಗಾಗಿ ಆಡಳಿತಾರೂಢ ಸರ್ಕಾರಗಳ ನಡೆಯನ್ನು ಪ್ರಶ್ನಿಸಿ ಶ್ರಮಿಕ ವರ್ಗದ ಜನರನ್ನು ಸಂಘಟಿಸುವ ಸಲುವಾಗಿ ಸ್ವಾತಂತ್ರ್ಯ ದಿನದ ಮುನ್ನಾದಿನ ಆಗಸ್ಟ್ 14ರ ಸಂಜೆಯಿಂದ 15ರ ಬೆಳಗಿನ ಜಾವದವರೆಗೆ ಅಹೋರಾತ್ರಿ ಕಾರ್ಯಕ್ರಮ ಹಮ್ಮಿಕೊಂಡು ರೈತ, ಕಾರ್ಮಿಕ ಹಾಗೂ ಕೂಲಿಕಾರರ ಪ್ರತಿಜ್ಞೆ ನಡೆಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಜನರನ್ನು ಜಾಗೃತಿಗೊಳಿಸಲು ಆಗಸ್ಟ್ 14ರವರೆಗೆ ಪ್ರಚಾರಾಂದೋಲನ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಾಥಾದಲ್ಲಿ ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ, ಸಿಐಟಿಯು ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ್, ತಾಲೂಕು ಅಧ್ಯಕ್ಷ ಶ್ರೀನಿವಾಸ, ಧನಂಜಯ, ಲೀಲಾವತಿ, ಬಾಲಾಜಿರಾವ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net